
ಮೊಳಕಾಲ್ಮುರು: ತೆಂಗಿನ ಮರದಿಂದ ನೀರಾ ಇಳಿಸುತ್ತಿದ್ದ ರೈತರೊಬ್ಬರ ತೋಟದ ಮೇಲೆ ದಾಳಿ ಮಾಡಿ ಅಬಕಾರಿ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಇಲ್ಲಿನ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತೆಂಗಿನ ಮರದಿಂದ ಇಳಿಸುವ ನೀರಾ ಆರೋಗ್ಯಕರ ಪೇಯವಾಗಿದೆ. ಹಲವು ರೋಗಗಳಿಗೆ ಇದು ರಾಮಬಾಣ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ‘ಕಲ್ಪವೃಕ್ಷ’ ಎಂದು ಕರೆಸಿಕೊಳ್ಳುವ ತೆಂಗಿನ ಮರದಿಂದ ಇಳಿಸುವ ನೀರಾವನ್ನು ‘ಕಲ್ಪರಸ’ ಎಂದು ಕರೆಯುತ್ತಾರೆ. ಸರ್ಕಾರವು ತೆಂಗಿನ ಬೆಳೆಗಾರರ ಸಮಸ್ಯೆ ಪರಿಗಣಿಸಿ ನೀರಾ ಇಳಿಸಲು ಅನುಮತಿ ನೀಡಿದೆ. ಆದರೆ ಅಬಕಾರಿ ಇಲಾಖೆಯ ಸ್ಥಳೀಯ ಸಿಬ್ಬಂದಿ ಇದಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರಿದರು.
ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿರುವ ವಸುಂಧರ ಸಸ್ಯಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನೀರಾ ಇಳಿಸಲಾಗುತ್ತಿದೆ. ಸಸ್ಯಕ್ಷೇತ್ರದ ಮಾಲೀಕರಾದ ಎಸ್.ಸಿ. ವೀರಭದ್ರಪ್ಪ ತೆಂಗಿನ ಉದ್ಯಮದಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನನಾಗಿದ್ದು, ಕೃಷಿ ಪಂಡಿತ ಪ್ರಶಸ್ತಿ ಪಡೆದಿದ್ದಾರೆ. ತೋಟಕಾರಿಕೆ, ಕೃಷಿ ಇಲಾಖೆಯ ಸಾಕಷ್ಟು ಕಾರ್ಯಾಗಾರಗಳು ಈ ಸಸ್ಯಕ್ಷೇತ್ರದಲ್ಲಿ ನಡೆದಿದ್ದು, ಇದು ತೋಈ ಭಾಗದ ತೋಟಗಾರಿಕೆ ವಿಶ್ವವಿದ್ಯಾಲಯ ಎಂದೇ ಹೆಸರು ಮಾಡಿದೆ. ಈಗ ಅಬಕಾರಿ ಇಲಾಖೆ ಮಾಡಿರುವ ತಪ್ಪಿನಿಂದಾಗಿ ಮಾದರಿ ರೈತರಿಗೆ ಅವಮಾನ ಮಾಡಿದಂತಾಗಿದೆ ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಗೂಡಂಗಡಿ, ಚಿಲ್ಲರೆ ಅಂಗಡಿ, ಡಾಬಾಗಳಲ್ಲಿ ಅಕ್ರಮವಾಗಿ ಮದ್ಯವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇವರನ್ನು ಪ್ರಶ್ನೆ ಮಾಡದ ಅಬಕಾರಿ ಅಧಿಕಾರಿಗಳು ಗುಬ್ಬಿ ಮೆಲೆ ಬ್ರಹ್ಮಾಸ್ತ್ರ ಎನ್ನುವಂತೆ ಆರೋಗ್ಯಕರ ಪೇಯ ನೀರಾ ಮಾರಾಟ ಮಾಡುವ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕೂಡಲೇ ಅಧಿಕಾರಿಗಳು ರೈತರ ಕ್ಷಮೆ ಕೋರಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕ ಅಧ್ಯಕ್ಷ ರವಿಕುಮಾರ್, ಎಸ್. ರಾಜಣ್ಣ, ಎಸ್.ಸಿ. ವೀರಭದ್ರಪ್ಪ, ಟಿ. ಚಂದ್ರಣ್ಣ, ಕೋಟಿ ವೀರಣ್ಣ, ಮಹೇಶ್, ವೆಂಕಟೇಶ್ ನಾಯಕ, ತಿಪ್ಪೇಶ್, ವೆಂಕಟರೆಡ್ಡಿ, ನಾಗೇಂದ್ರಪ್ಪ, ಮೇಸ್ತ್ರಿ ಪಾಪಯ್ಯ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.