ADVERTISEMENT

ಮದುವೆ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:53 IST
Last Updated 5 ಡಿಸೆಂಬರ್ 2022, 4:53 IST
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಶಾಸಕ ಚಂದ್ರಪ್ಪ ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು.
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಶಾಸಕ ಚಂದ್ರಪ್ಪ ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು.   

ಭರಮಸಾಗರ: ಗ್ರಾಮದಲ್ಲಿ ಭಾನುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ ಊಟ ಮಾಡಿದ ವಧು– ವರ ಸೇರಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಇಲ್ಲಿನ ಹೆಗ್ಗೆರೆ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನೆರವೇರಿತ್ತು. ಮಧ್ಯಾಹ್ನ ಊಟ ಮಾಡಿದ್ದ ಭರಮಸಾಗರ, ಕೋಗುಂಡೆ ಗ್ರಾಮದ ಕೆಲವರಲ್ಲಿ ಸಂಜೆ ಹೊತ್ತಿಗೆ ವಾಂತಿ, ಭೇದಿಕಾಣಿಸಿಕೊಂಡಿತು. ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ಜಿಲ್ಲಾ ಆರೋಗ್ಯ ಅಧಿಕಾರಿ ಆರ್. ರಂಗನಾಥ್ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು. ಬಹುತೇಕರಲ್ಲಿ ವಾಂತಿ, ಭೇದಿ, ತಲೆ
ನೋವಿನಂತ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.ಗಂಭೀರ ಪ್ರಕರಣಗಳಿಲ್ಲ. ಬಿ.ಪಿ ಮತ್ತು ಇತರೆ ತೊಂದರೆಯಿಂದ ಬಳಲುತ್ತಿದ್ದ ಏಳು ಜನರನ್ನು ಮುಂಜಾಗ್ರತಾ ಕ್ರಮವಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಸ್ವಸ್ಥರ
ವಾಂತಿ ಮಾದರಿ ಹಾಗೂ ಆಹಾರವನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗುವುದು ಎಂದರು.

ADVERTISEMENT

ಶಾಸಕ ಎಂ. ಚಂದ್ರಪ್ಪ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದರು.

ಕೋಗುಂಡೆ, ಕಾಲ್ಗೆರೆ, ಭರಮಸಾಗರ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಹೆಚ್ಚಿನ ಸೌಕರ್ಯ ಕಲ್ಪಿಸಿ ಎಂದು ಸಾರ್ವಜನಿಕರು ಮನವಿ ಮಾಡಿದರು.

₹ 10 ಕೋಟಿ ವೆಚ್ಚದಲ್ಲಿ ಸಿರಿಗೆರೆ, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದಾಗಿ ಶಾಸಕ ಚಂದ್ರಪ್ಪ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್,ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ಇನ್‌ಸ್ಪೆಕ್ಟರ್ ಮಧು, ಕಂದಾಯ ಇಲಾಖೆ ಆರ್‌ಐ ಪರಶುರಾಮ್, ಡಾ. ವಿನಯ್ರಾಜ್, ಶ್ರೀಧರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್, ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.