ADVERTISEMENT

ಮೂಲೆ ಗುಂಪಾದ ಸೊಳ್ಳೆ ನಿಯಂತ್ರಿಸುವ ಮಷಿನ್‌ಗಳು

ಚರಂಡಿಗಳಿರುವ ಎಲ್ಲ ಪ್ರದೇಶಗಳಲ್ಲೂ ಉಪಯೋಗಿಸಲು ನಾಗರಿಕರ ಒತ್ತಾಯ

ಕೆ.ಎಸ್.ಪ್ರಣವಕುಮಾರ್
Published 9 ಡಿಸೆಂಬರ್ 2018, 16:20 IST
Last Updated 9 ಡಿಸೆಂಬರ್ 2018, 16:20 IST
ಚಂದ್ರಪ್ಪ, ನಗರಸಭೆ ಪೌರಾಯುಕ್ತ.
ಚಂದ್ರಪ್ಪ, ನಗರಸಭೆ ಪೌರಾಯುಕ್ತ.   

ಚಿತ್ರದುರ್ಗ: ನಗರ ವ್ಯಾಪ್ತಿಯ ಚರಂಡಿಗಳಲ್ಲಿ ಸೊಳ್ಳೆ ಸಂತತಿ ಹೆಚ್ಚಾಗುವುದನ್ನು ತಡೆಯಲು ಹಾಗೂ ನಾಶ ಮಾಡಲು ಖರೀದಿಸಿದ್ದ ಔಷಧ ಸಿಂಪಡಿಸುವ ಸ್ಪ್ರೇ ಮಷಿನ್‌ಗಳು ಕೆಲವೆಡೆ ಬಳಕೆಯಾಗುತ್ತಿವೆ. ಇನ್ನೂ ಹಲವೆಡೆ ಬಳಸುವ ಮುನ್ನವೇ ದೂಳು ಹಿಡಿದು ಹಾಳಾಗುತ್ತಿವೆ...

ಸಾಂಕ್ರಾಮಿಕ ರೋಗಗಳನ್ನು ತಡೆಯಲು ನಗರಸಭೆಯಿಂದ 2017-18 ನೇ ಸಾಲಿನಲ್ಲಿನಗರದ 35 ವಾರ್ಡ್‌ಗಳಿಗೂ ತಲಾ ಒಂದರಂತೆ ₹ 2.5 ಸಾವಿರದಿಂದ ₹ 3 ಸಾವಿರ ಮೌಲ್ಯದಲ್ಲಿ ಈ ಯಂತ್ರಗಳನ್ನು ಖರೀದಿಸಲಾಗಿತ್ತು. ಅದರಲ್ಲಿ ಕೆಲವು ಬಳಸದೇ ಮೂಲೆ ಗುಂಪಾಗುತ್ತಿವೆ.

ನಗರದಲ್ಲಿನ ಎಲ್ಲ ವಾರ್ಡ್‌ಗಳ ಮನೆಗಳು, ಕೊಳಗೇರಿ ಪ್ರದೇಶಗಳು, ಕೆಲ ಸರ್ಕಾರಿ ಕಚೇರಿಗಳಲ್ಲೂ ಮಿತಿ ಮೀರಿದ ಸೊಳ್ಳೆಗಳು ಕಂಡು ಬರುತ್ತಿವೆ. ಗೂಯ್‌ ಎಂದು ಶಬ್ಧ ಮಾಡುತ್ತಲೇ ಕಚ್ಚುವ ಅವುಗಳ ನಿಯಂತ್ರಣ ಮಾತ್ರ ಇಂದಿಗೂ ಸಾಧ್ಯವಾಗುತ್ತಿಲ್ಲ.

ADVERTISEMENT

ಕಸ ನಿರ್ವಹಣೆ ಮಾಡುವ ನಗರಸಭೆ ಪೌರಕಾರ್ಮಿಕರಿಗೆ ಔಷಧ ಸಿಂಪಡಿಸುವ ಜವಾಬ್ದಾರಿ ನೀಡಲಾಗಿತ್ತು. ಸ್ಪ್ರೇ ಮಷಿನ್‌ನೊಳಗೆ ಸಿಬ್ಬಂದಿ ಔಷಧ ತುಂಬಿ ಬೆನ್ನಹಿಂದೆ ಹಾಕಿಕೊಂಡು ಚರಂಡಿಗಳ ಸಂದಿಗೊಂದಿಗಳಲ್ಲಿ, ಕನ್ಸರ್ವೆನ್ಸಿಯಂಥ ಇಕ್ಕಟ್ಟಿನ ಜಾಗದಲ್ಲೂ ಔಷಧ ಸಿಂಪಡಿಸಲು ಸಹಕಾರಿಯಾಗಲಿದೆ ಎಂಬ ಉದ್ದೇಶಕ್ಕಾಗಿ ಖರೀದಿಸಿದ್ದ ಯಂತ್ರಗಳು ಕೊಳಗೇರಿ ಪ್ರದೇಶ ಹೊರತುಪಡಿಸಿ ವಾರ್ಡ್‌ಗಳ ಉಳಿದೆಡೆ ಔಷಧ ಸಿಂಪಡಿಸುವ ಕೆಲಸವಾಗುತ್ತಿಲ್ಲ.

‘ನಗರದ ಬಹುತೇಕ ಚರಂಡಿಗಳಲ್ಲಿ ಪ್ಲಾಸ್ಟಿಕ್‌ ಸೇರಿ ಅನುಪಯುಕ್ತ ವಸ್ತುಗಳಿಂದ ಕೊಳಚೆ ಕಟ್ಟಿಕೊಂಡಿದ್ದು, ನೀರು ಸರಾಗವಾಗಿ ಮುಂದೆ ಹರಿಯುತ್ತಿಲ್ಲ. ಇದರಿಂದಾಗಿ ಸೊಳ್ಳೆಗಳು ಹೆಚ್ಚಿವೆ. ಹಿಂದೆಲ್ಲಾ ಚರಂಡಿಗಳಿಗೆ ಡಿಡಿಟಿ ಪೌಡರ್‌ ಹಾಕಲಾಗುತ್ತಿತ್ತು. ಅದರಿಂದ ಒಂದಿಷ್ಟು ಸೊಳ್ಳೆಗಳು ಕಡಿಮೆ ಆಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಕೂಡ ಹಾಕುತ್ತಿಲ್ಲ’ ಎಂದು ಕೆಲ ನಾಗರಿಕರು ದೂರಿದ್ದಾರೆ.

ಪೌರಕಾರ್ಮಿಕರು ನಿತ್ಯವೂ ಅನೇಕ ಕಡೆಗಳಲ್ಲಿ ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಆದರೂ ಕೆಲ ನಾಗರಿಕರು ಅನುಪಯುಕ್ತ ಕಸವನ್ನು ಚರಂಡಿಗೆ ಎಸೆಯುತ್ತಿದ್ದಾರೆ. ಇದು ನಿಲ್ಲದ ಹೊರತು ಸೊಳ್ಳೆಗಳನ್ನು ನಿಯಂತ್ರಣಕ್ಕೆ ತರುವುದು ಕಷ್ಟಕರ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

‘ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ ಹೊರತು ಆಡಳಿತ ಯಂತ್ರ ಚುರುಕುಗೊಳ್ಳಲು ಸಾಧ್ಯವಿಲ್ಲ. ಎಲ್ಲವನ್ನೂ ಅಧಿಕಾರಿಗಳೇ ನೋಡಿಕೊಳ್ಳಲು ಸಾಧ್ಯವಿಲ್ಲ. ಆಯಾ ವಾರ್ಡ್‌ಗಳ ಸದಸ್ಯರು ಈ ಬಗ್ಗೆ ಗಮನಹರಿಸಿದರೆ ಬದಲಾವಣೆ ಖಂಡಿತ ಆಗಲಿದೆ’ ಎಂದು ಕೆಲ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

‘ಕೊಳಗೇರಿಗಳಲ್ಲಷ್ಟೇ ಸೊಳ್ಳೆಗಳು ಹೆಚ್ಚು ಎಂಬುದು ಸತ್ಯಕ್ಕೆ ದೂರ. ಪ್ರತಿಷ್ಠಿತ ಬಡಾವಣೆಗಳಲ್ಲಿಯೂ ಸೊಳ್ಳೆಗಳಿವೆ. ಅವುಗಳಿರದ ಜಾಗಗಳೇ ಇಲ್ಲ. ಆದ್ದರಿಂದ ನಗರಸಭೆ ಈ ಕುರಿತು ಜಾಗ್ರತೆವಹಿಸಿ ಸ್ಪ್ರೇ ಮಷಿನ್‌ಗಳ ಮೂಲಕ ಔಷಧ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಬೇಕು’ ಎಂದು ಸ್ಥಳೀಯರಾದ ರಾಕೇಶ್, ಪ್ರಶಾಂತ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.