ADVERTISEMENT

ಭಾಗ್ಯಗಳನ್ನು ತಿರಸ್ಕರಿಸುವವರೆಗೂ ಉದ್ಧಾರ ಅಸಾಧ್ಯ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:15 IST
Last Updated 26 ಜನವರಿ 2025, 15:15 IST
ಚಿತ್ರದುರ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹ ಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಪೌರಕಾರ್ಮಿಕರನ್ನು ಸನ್ಮಾನಿಸಿದರು
ಚಿತ್ರದುರ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹ ಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಪೌರಕಾರ್ಮಿಕರನ್ನು ಸನ್ಮಾನಿಸಿದರು   

ಚಿತ್ರದುರ್ಗ: ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇಂತಹ ಬಿಟ್ಟಿ ಭಾಗ್ಯಗಳನ್ನು ಜನ ಎಲ್ಲಿಯವರೆಗೂ ತಿರಸ್ಕರಿಸುವುದಿಲ್ಲವೋ ಅಲ್ಲಿಯತನಕ ಉದ್ಧಾರ ಸಾಧ್ಯವಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಗಣರಾಜ್ಯೋತ್ಸವದ ಅಂಗವಾಗಿ ವಿಧಾನಪರಿಷತ್ ಸದಸ್ಯ ಕೆ.ಎಸ್‌. ನವೀನ್‌ ಅವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸಹ ಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ 24,000 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ಜೀವನ ಭದ್ರತೆ ಕೊಟ್ಟಿದ್ದರು. ಆದರೆ ಈ ಸರ್ಕಾರ ಏನು ಮಾಡುತ್ತಿದೆ?’ ಎಂದು ಪ್ರಶ್ನಿಸಿದರು.

ADVERTISEMENT

‘12ನೇ ಶತಮಾನದ ಬಸವಣ್ಣನವರ ತತ್ವ ಸಿದ್ದಾಂತಗಳ ಮೇಲೆ ಆಡಳಿತ ನಡೆಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಪೌರಕಾರ್ಮಿಕರ ಪಾದ ತೊಳೆದು ಯಾರು ಮೇಲು, ಕೀಳಲ್ಲ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದಲ್ಲಿ ಭೀಮ ಸಂಗಮ ನಡೆಯುತ್ತಿದೆ’ ಎಂದರು.

‘ಸಂವಿಧಾನಕ್ಕೆ ನಿಜವಾದ ಗೌರವ ಕೊಟ್ಟವರು ಪ್ರಧಾನಿ ಮೋದಿ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಫಲವಾಗಿ ಚಹ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ಅವಕಾಶ ಸಿಕ್ಕಿತು’ ಎಂದು ತಿಳಿಸಿದರು.

‘ಭಾರತಕ್ಕೆ ಸುಭದ್ರ ಸಂವಿಧಾನ ನೀಡಿದ ಅಂಬೇಡ್ಕರ್‌ ಅವರನ್ನು ಗೌರವಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ಮೋದಿ ಭೀಮ ಸಂಗಮದ ಮೂಲಕ ಪೌರಕಾರ್ಮಿಕರ ಜೊತೆ ಸಹ ಪಂಕ್ತಿ ಭೋಜನ ಮಾಡುವಂತೆ ತಿಳಿಸಿದ್ದಾರೆ. ಈ ಕಾರಣ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರೊಂದಿಗೆ ಊಟ ಮಾಡುತ್ತಿದ್ದೇವೆ’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್. ನವೀನ್‌ ಹೇಳಿದರು.

ಮಾಜಿ ಶಾಸಕರಾದ ಎಸ್‌.ಕೆ. ಬಸವರಾಜನ್‌, ಎಸ್‌.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಬಿಜೆಪಿ ಯುವ ಮುಖಂಡ ಜಿ.ಎಂ. ಅನಿತ್, ದಗ್ಗೆ ಶಿವಪ್ರಕಾಶ್, ನಾಗರಾಜ್‍ಬೇದ್ರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.