ADVERTISEMENT

ವೆಂಟಿಲೇಟರ್‌ ಇದ್ದರೂ ಬಳಕೆಗೆ ಲಭ್ಯವಿಲ್ಲ: ಸಂಸದ ಎ. ನಾರಾಯಣಸ್ವಾಮಿ ಬೇಸರ

ಸಂಸದ ಎ.ನಾರಾಯಣಸ್ವಾಮಿ ಬೇಸರ, ಸಿಬ್ಬಂದಿ ನೇಮಕಾತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 12:18 IST
Last Updated 26 ಏಪ್ರಿಲ್ 2021, 12:18 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಸಂಸದ ಎ.ನಾರಾಯಣಸ್ವಾಮಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದಾರೆ.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಸಂಸದ ಎ.ನಾರಾಯಣಸ್ವಾಮಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದಾರೆ.   

ಚಿತ್ರದುರ್ಗ: ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಜಿಲ್ಲೆಯಲ್ಲಿ 30 ವೆಂಟಿಲೇಟರ್‌ಗಳು ಲಭ್ಯ ಇವೆ. ತಂತ್ರಜ್ಞರ ಕೊರತೆಯ ಕಾರಣಕ್ಕೆ ಬಳಕೆಯಾಗುತ್ತಿರುವುದು 12 ಮಾತ್ರ. ಉಳಿದವರು ನಾಮಕಾವಸ್ಥೆಗೆ ಆಸ್ಪತ್ರೆಯಲ್ಲಿವೆ ಎಂಬ ಸಂಗತಿ ಸೋಮವಾರ ಬೆಳಕಿಗೆ ಬಂದಿತು.

ಸಂಸದ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಗಮನ ಸೆಳೆಯಿತು. ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಸಂಸದರು, ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ವರ್ಷದ ಹಿಂದೆಯೇ ವೆಂಟಿಲೇಟರ್‌ಗಳನ್ನು ಖರೀದಿಸಿ ಎಲ್ಲ ತಾಲ್ಲೂಕುಗಳಿಗೆ ಒದಗಿಸಲಾಗಿತ್ತು. ಇದನ್ನು ನಿರ್ವಹಣೆ ಮಾಡುವ ನುರಿತ ಸಿಬ್ಬಂದಿ, ತಜ್ಞ ವೈದ್ಯರ ಕೊರತೆ ಇರುವುದರಿಂದ ಇವು ಬಳಕೆಯಾಗುತ್ತಿಲ್ಲ. ವೆಂಟಿಲೇಟರ್‌ ಅಗತ್ಯ ಇರುವ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ADVERTISEMENT

‘ಪ್ರತಿ ತಾಲ್ಲೂಕಿಗೆ ಎರಡು ವೆಂಟಿಲೇಟರ್‌ ಒದಗಿಸಲಾಗಿದೆ. ಇವು ಬಳಕೆ ಆಗುತ್ತಿಲ್ಲ ಎಂಬುದು ಸೋಜಿಗದ ಸಂಗತಿ. ನುರಿತ ಸಿಬ್ಬಂದಿಯ ಅಗತ್ಯವಿದೆ ಎಂಬುದನ್ನು ಏಕೆ ಈವರೆಗೆ ಮನವರಿಕೆ ಮಾಡಿಕೊಟ್ಟಿಲ್ಲ? ಅವು ಕಾರ್ಯನಿರ್ವಹಿಸದೇ ಹೋದರೆ ಜನರಿಗೆ ತೊಂದರೆ ಆಗುವುದಿಲ್ಲವೇ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಸದರು ತರಾಟೆ ತೆಗೆದುಕೊಂಡರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಒಂಬತ್ತು ಹಾಗೂ ಬಸವೇಶ್ವರ ಆಸ್ಪತ್ರೆಯ ಎರಡು ವೆಂಟಿಲೇಟರ್‌ಗಳು ಮಾತ್ರ ಸೇವೆ ಒದಗಿಸುತ್ತಿವೆ. ವೆಂಟಿಲೇಟರ್‌ ಬಳಕೆ ಮಾಡುವ ನಾಲ್ವರು ಅರಿವಳಿಕೆ ತಜ್ಞರು ಜಿಲ್ಲಾ ಆಸ್ಪತ್ರೆಯಲ್ಲಿದ್ದಾರೆ. ಇವರೊಂದಿಗೆ 20 ಶುಶ್ರೂಷಕಿಯರಿಗೆ ತರಬೇತಿ ನೀಡಲಾಗಿದೆ. ಇನ್ನೂ ಐವರು ಅರಿವಳಿಕೆ ತಜ್ಞರು ಹಾಗೂ ತಂತ್ರಜ್ಞರ ಅಗತ್ಯವಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಬಸವರಾಜಪ್ಪ ಸಭೆಗೆ ಮಾಹಿತಿ ನೀಡಿದರು.

‘ವೆಂಟಿಲೇಟರ್‌ಗೆ ಅಗತ್ಯ ಇರುವ ತಂತ್ರಜ್ಞರು ಹಾಗೂ ಅರಿವಳಿಕೆ ತಜ್ಞರನ್ನು ನೇಮಕಾತಿ ಮಾಡಿಕೊಳ್ಳಿ. ವೈದ್ಯರು ಸಿಗದೇ ಹೋದರೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನಾದರೂ ಪಡೆಯಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ವೆಂಟಿಲೇಟರ್‌ಗಳು ಮೂಲೆ ಸೇರಬಾರದು’ ಎಂದು ನಾರಾಯಣಸ್ವಾಮಿ ತಾಕೀತು ಮಾಡಿದರು.

‘ಕೋವಿಡ್‌ ರೋಗಿಯ ಆಕ್ಸಿಜನ್‌ ಸ್ಯಾಚುರೇಷನ್‌ 92ಕ್ಕಿಂತ ಕಡಿಮೆ ಇದ್ದರೆ ವೆಂಟಿಲೇಟರ್‌ ಅಗತ್ಯವಿದೆ. 92ರಿಂದ 97ರವರೆಗೆ ಇದ್ದರೆ ಆಕ್ಸಿಜನ್‌ ಹಾಸಿಗೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 12 ರೋಗಿಗಳು ವೆಂಟಿಲೇಟರ್‌ನಲ್ಲಿ ಹಾಗೂ 38 ರೋಗಿಗಳು ಆಕ್ಸಿಜನ್‌ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್‌ ವಿವರಿಸಿದರು.

‘ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮೇಲೆ ಸರಿಯಾದ ನಿಗಾ ಇಡದ ಪರಿಣಾಮ ಬೆಂಗಳೂರಿನಲ್ಲಿ ಸಮಸ್ಯೆ ಬಿಗಡಾಯಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಧಾವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಯ ಸ್ಥಿತಿ ಕೈಮೀರಿ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ನೀಡುವುದು ಅನಿವಾರ್ಯವಾಗಿದೆ. ಇಂತಹ ಸ್ಥಿತಿ ಜಿಲ್ಲೆಯಲ್ಲಿ ತಲೆದೋರಬಾರದು. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೆ ಕೊರತೆ ಆಗಬಾರದು. ಅಗತ್ಯ ಔಷಧ, ಆಕ್ಸಿಜನ್‌ ದಾಸ್ತಾನು ಮಾಡಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು.

ತಿಂಗಳಲ್ಲಿ ಐವರು ಸಾವು

ಕೋವಿಡ್‌ ಎರಡನೇ ಅಲೆಗೆ ಏ.1ರಿಂದ ಈವರೆಗೆ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಮಾಹಿತಿ ನೀಡಿದರು.

‘ಚಿತ್ರದುರ್ಗದ ಮೂವರು, ಚಳ್ಳಕೆರೆ ಹಾಗೂ ಹಿರಿಯೂರಿನ ತಲಾ ಒಬ್ಬರು ಮೃತಪಟ್ಟಿದ್ದಾರೆ. ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಹೊರ ಜಿಲ್ಲೆಗೆ ತೆರಳಿದ್ದರಿಂದ ಚಿತ್ರದುರ್ಗದ ಬುಲೆಟಿನ್‌ಗೆ ಸೇರ್ಪಡೆಯಾಗಿಲ್ಲ’ ಎಂದರು.

‘ಮೊದಲ ಅಲೆಗೆ 69 ಜನರು ಮೃತಪಟ್ಟಿದ್ದರು. ನವೆಂಬರ್‌ನಿಂದ ಏಪ್ರಿಲ್‌ವರೆಗೆ ಕೋವಿಡ್‌ ಸಾವು ಸಂಭವಿಸಿರಲಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಪ್ರಮಾಣ ಶೇ 0.49 ಇದೆ. ರಾಜ್ಯದಲ್ಲಿಯೇ ತೀರಾ ಕನಿಷ್ಠ ಪ್ರಮಾಣದ ಸಾವು ಜಿಲ್ಲೆಯಲ್ಲಿ ಸಂಭವಿಸಿವೆ’ ಎಂದು ವಿವರಿಸಿದರು.

ಆಕ್ಸಿಜನ್‌ ಘಟಕಕ್ಕೆ ಸೂಚನೆ

ಆಕ್ಸಿಜನ್‌ ಉತ್ಪಾದನಾ ಘಟಕ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳುವಂತೆ ಸಂಸದ ಎ.ನಾರಾಯಣಸ್ವಾಮಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು.

ಚಿತ್ರದುರ್ಗಕ್ಕೆ ಅಗತ್ಯವಿರುವ ಆಕ್ಸಿಜನ್‌ ಹರಿಹರ ಹಾಗೂ ದಾವಣಗೆರೆಯಿಂದ ಬರುತ್ತಿದೆ. ಒಂದು ಟ್ಯಾಂಕರ್ ಹಾಗೂ 148 ಸಿಲಿಂಡರ್‌ಗಳು ಜಿಲ್ಲೆಯಲ್ಲಿವೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಆಕ್ಸಿಜನ್ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಉತ್ಪಾದನಾ ಘಟಕದ ಬಗ್ಗೆ ಚರ್ಚೆ ನಡೆಯಿತು.

‘ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿರುವ ಸ್ಥಳವನ್ನು ಹೊರತುಪಡಿಸಿ ಉಳಿದೆಡೆ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಿ. ಅನುದಾನದ ಲಭ್ಯತೆ ಇದ್ದು, ಆಕ್ಸಿಜನ್‌ ಉತ್ಪಾದನಾ ಘಟಕ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ. ಮತ್ತೊಂದು ಜಿಲ್ಲೆಯ ಮೇಲಿನ ಅವಲಂಬನೆ ತಪ್ಪಲಿದೆ’ ಎಂದು ಸಂಸದರು ಅಭಿಪ್ರಾಯಪಟ್ಟರು.

1.85 ಲಕ್ಷ ಜನರಿಗೆ ಲಸಿಕೆ

ಜಿಲ್ಲೆಯ 15 ಲಕ್ಷ ಜನಸಂಖ್ಯೆಯಲ್ಲಿ 1.85 ಲಕ್ಷ ಜನರು ಮಾತ್ರ ಕೋವಿಡ್‌ ಲಸಿಕೆ ಲಸಿಕೆ ಪಡೆದಿದ್ದಾರೆ. 4.48 ಲಕ್ಷ ಜನರಿಗೆ ಲಸಿಕೆ ನೀಡುವಂತೆ ಸರ್ಕಾರ ನೀಡಿದ ಗುರಿಯಲ್ಲಿ ಶೇ 50ರಷ್ಟು ಸಾಧನೆ ಆಗಿಲ್ಲ ಎಂಬುದು ಸಂಸದ ಎ. ನಾರಾಯಣಸ್ವಾಮಿ ಅಸಮಾಧಾನಕ್ಕೆ ಕಾರಣವಾಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ‘ಜಿಲ್ಲೆಯಲ್ಲಿ 199 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೂರು ಹಂತದಲ್ಲಿ ಲಸಿಕೆ ನೀಡಲಾಗಿದೆ. 60 ವರ್ಷ ಮೀರಿದ 1.45 ಲಕ್ಷ ಜನರಲ್ಲಿ 1.10 ಲಕ್ಷ ಜನರು ಲಸಿಕೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ, ‘ನಮ್ಮ ಬೆನ್ನು ನಾವೇ ತಟ್ಟಿಕೊಂಡು ಸಾಕಾಗಿದೆ. ಅರ್ಧದಷ್ಟು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಲಸಿಕೆಯನ್ನು ಆಂದೋಲನದ ಮಾದರಿಯಲ್ಲಿ ಕೈಗೊಳ್ಳಿ. ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ನೀಡಿ ರಾಜ್ಯಕ್ಕೆ ಮಾದರಿಯಾಗಿ’ ಎಂದು ಸಲಹೆ ನೀಡಿದರು.

ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ನೂರಕ್ಕೂ ಹೆಚ್ಚು ಜನರು ಕೆಲಸ ಮಾಡುವ ಸಂಸ್ಥೆಯಲ್ಲೂ ಲಸಿಕೆ ನೀಡಲಾಗುತ್ತಿದೆ. ಲಸಿಕೆಗೆ ಜನರನ್ನು ಕರೆತರಲು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸೇವೆ ಪಡೆಯಲಾಗುವುದು.

–ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

ಮಾಸ್ಕ್‌ ಧರಿಸದ, ಅಂತರ ಕಾಪಾಡಿಕೊಳ್ಳದವರಿಂದ ಈವರೆಗೆ ₹ 7 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಅನೇಕರನ್ನು ಜೈಲಿಗೆ ಕಳುಹಿಸಲಾಗಿದೆ. ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು.

–ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪಂಚಾಯತರಾಜ್‌ ಇಲಾಖೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಗ್ರಾಮ ಮಟ್ಟದ ಸಮಿತಿ ಈ ಹಿಂದೆ ರಚನೆ ಆಗಿದ್ದವು. ಅದೇ ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲು ಚರ್ಚೆ ನಡೆಸಲಾಗುತ್ತಿದೆ.

–ಡಾ.ಕೆ.ನಂದಿನಿದೇವಿ, ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.