ಸಿರಿಗೆರೆ: ‘ಕ್ಷೇತ್ರದ ಎಲ್ಲ ಸಮುದಾಯದ ಜನರ ಅಭಿವೃದ್ಧಿಯೇ ನನ್ನ ಬದ್ಧತೆ. ಅದಕ್ಕಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ’ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಭರಮಸಾಗರ ಸಮೀಪದ ಹುಲ್ಲೇಹಾಳು ಗ್ರಾಮದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಕೆರೆ ಹಾಗೂ ₹ 20 ಲಕ್ಷ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಯಾವುದೇ ಜಾತಿಗಳನ್ನು ಎತ್ತಿ ಕಟ್ಟದೆ ಎಲ್ಲರಲ್ಲೂ ಸಮಾನ ಭಾವ ಇರಿಸಿಕೊಂಡಿದ್ದೇನೆ. ಇದು ಕ್ಷೇತ್ರದ ಜನರ ಮನದಲ್ಲಿ ಉಳಿದಿರುವುದರಿಂದ 30 ವರ್ಷಗಳ ಕಾಲ ನಿರಂತರವಾಗಿ ಶಾಸಕನಾಗಿದ್ದೇನೆ. ಜನರ ಪ್ರೀತಿ ವಿಶ್ವಾಸ ನನ್ನ ಮೇಲಿರುವುದಕ್ಕೆ ಇದು ಸಾಕ್ಷಿ’ ಎಂದರು.
‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ₹ 660 ಕೋಟಿ ಅನುದಾನ ನೀಡಿದ ಫಲವಾಗಿ ತಾಲ್ಲೂಕಿನಾದ್ಯಂತ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಎಲ್ಲಾ ಕೆರೆಗಳು ತುಂಬಿವೆ. ಕುಡಿಯುವ ನೀರಿಗಾಗಿ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತರಲು ₹ 367 ಕೋಟಿ ವೆಚ್ಚದಲ್ಲಿ ಈಗಾಗಲೇ ಪೈಪ್‍ಲೈನ್ ಅಳವಡಿಕೆ ಕಾರ್ಯ ಮುಗಿದಿದೆ. ರೈತರ ತೋಟಗಳು ಒಣಗಬಾರದೆಂದು ₹ 250 ಕೋಟಿ ಖರ್ಚು ಮಾಡಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಎಂಟು ಕೊಠಡಿಗಳನ್ನು ಕಟ್ಟಿಸಿದ್ದೇನೆ. ಇನ್ನು ನಾಲ್ಕು ಕೊಠಡಿ ಕಟ್ಟಿಸಲಾಗುವುದು. ಒಂದು ಬಸ್ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಂದು ಕೊಡುವುದಾಗಿ’ ಭರವಸೆ ನೀಡಿದರು.
‘ಇನ್ನು ಐವತ್ತು ವರ್ಷಗಳ ಕಾಲ ಕುಡಿಯುವ ನೀರು ಹಾಗೂ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ನಿರ್ಮಲಾ ತಿಪ್ಪೇಸ್ವಾಮಿ, ಸದಸ್ಯರಾದ ರೂಪಾ ರೇವಣ್ಣ, ರುದ್ರೇಶ್, ಬಸವರಾಜ್, ಕವಿತಾ, ರೈತ ಮುಖಂಡ ನಾರಪ್ಪ, ತಾ.ಪಂ. ಮಾಜಿ ಸದಸ್ಯರಾದ ಕಲ್ಲೇಶ್, ಮೋಹನ್, ರಾಜಣ್ಣ, ಸತೀಶ್ ತಿಪ್ಪಣ್ಣ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.