ADVERTISEMENT

ಚಿತ್ರದುರ್ಗ | ರೇಷ್ಮೆ ಸೀರೆ ಮಾರಾಟ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಆರಂಭವಾಗಿರುವ ಮೈಸೂರು ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸೀರೆಯೊಂದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ. ಕೆಎಸ್‌ಐಸಿ ಪ್ರಧಾನ ವ್ಯವಸ್ಥಾಪಕ ಎಸ್‌.ಭಾನುಪ್ರಕಾಶ್‌ ಇದ್ದಾರೆ.
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಆರಂಭವಾಗಿರುವ ಮೈಸೂರು ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸೀರೆಯೊಂದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ. ಕೆಎಸ್‌ಐಸಿ ಪ್ರಧಾನ ವ್ಯವಸ್ಥಾಪಕ ಎಸ್‌.ಭಾನುಪ್ರಕಾಶ್‌ ಇದ್ದಾರೆ.   

ಚಿತ್ರದುರ್ಗ: ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಸಂಭ್ರಮವನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಇನ್ನಷ್ಟು ಹೆಚ್ಚಿಸಿದೆ. ಫೆ.19ರಿಂದ 23ರವರೆಗೆ ಇಲ್ಲಿನ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಬುಧವಾರದಿಂದ ಆರಂಭವಾಗಿದೆ.

ಸೀರೆ, ಪಂಚೆ, ಅಂಗಿ, ಟೈ ಹಾಗೂ ಶಾಲ್‌ ಕೂಡ ಮೇಳದಲ್ಲಿವೆ. ಮಾರಾಟ ಮೇಳದ ಅಂಗವಾಗಿ ಉತ್ಪನ್ನಗಳ ಮೇಲೆ ಶೇ 25ರಷ್ಟು ರಿಯಾಯಿತಿಯನ್ನು ನಿಗಮ ಘೋಷಣೆ ಮಾಡಿದೆ. ಐದು ದಿನವೂ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮೇಳ ನಡೆಯಲಿದೆ.

ಕೆಎಸ್‍ಐಸಿಯ ನಾಜೂಕಿನ ವಿನ್ಯಾಸದ ‘ಕ್ರೇಪ್ ಡಿ ಚೈನ್’ ಸೀರೆ ಹಾಗೂ ಜಾರ್ಜ್ ಮತ್ತು ಸಾದಾ ಮುದ್ರಿತ ಸೀರೆಗಳು ಪ್ರದರ್ಶನದ ಕೇಂದ್ರಬಿಂದು. ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಕೂಡ ಪರಿಚಯಿಸಲಾಗಿದೆ. ಹಬ್ಬ ಹಾಗೂ ವಿವಾಹಕ್ಕೆ ಬಟ್ಟೆ ಖರೀದಿಸಲು ಇಚ್ಛೆಯುಳ್ಳವರಿಗೆ ಇದೊಂದು ಉತ್ತಮ ಅವಕಾಶ. ₹ 6 ಸಾವಿರದಿಂದ ₹ 1.5 ಲಕ್ಷ ಮೌಲ್ಯದ ಸೀರೆಗಳು ಪ್ರದರ್ಶನದಲ್ಲಿವೆ.

ADVERTISEMENT

ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ, ವಿನೂತನ ವಿನ್ಯಾಸದ ₹ 40 ಸಾವಿರ ಮೌಲ್ಯದ ಜರಿಸೀರೆಯನ್ನು ಬಿಡುಗಡೆ ಮಾಡಿದರು.

‘ಪರಿಶುದ್ಧ ರೇಷ್ಮೆಯಿಂದ ಈ ಸೀರೆಗಳನ್ನು ತಯಾರಿಸಲಾಗಿದೆ. ಉತ್ತಮ ಗುಣಮಟ್ಟ ಹೊಂದಿದ ಸೀರೆಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ಈ ಉದ್ಯಮ ‘ಮುಖ್ಯಮಂತ್ರಿಗಳ ವಾರ್ಷಿಕ ರತ್ನ’ ಪ್ರಶಸ್ತಿಗೆ ಪಾತ್ರವಾಗಿದೆ. ಸೀರೆಯನ್ನು ದೀರ್ಘ ಕಾಲದವರೆಗೆ ರಕ್ಷಣೆ ಮಾಡಿದವರಿಗೆ ನಿಗಮ ಬಹುಮಾನ ನೀಡಲಿದೆ’ ಎಂದು ವಿನೋತ್‌ ಪ್ರಿಯಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.