ADVERTISEMENT

ಸಂತೆಕಟ್ಟೆಗೆ ತರಕಾರಿ ವ್ಯಾಪಾರಸ್ಥರ ಹಿಂದೇಟು

ನಿರ್ಮಾಣವಾಗಿ ಏಳು ವರ್ಷ ಕಳೆದರೂ ಕಾರ್ಯಾರಂಭವಾಗಿಲ್ಲ

ಜಿ.ಬಿ.ನಾಗರಾಜ್
Published 28 ಏಪ್ರಿಲ್ 2019, 19:46 IST
Last Updated 28 ಏಪ್ರಿಲ್ 2019, 19:46 IST
ಚಿತ್ರದುರ್ಗದ ಖಾಸಗಿ ಬಸ್‌ ನಿಲ್ದಾಣದ ಸಮೀಪ ತರಕಾರಿ ಮಾರುಕಟ್ಟೆಗೆ ನಿರ್ಮಿಸಿದ ಸಂತೆಕಟ್ಟೆ ಪಾಳುಬಿದ್ದಿದೆ
ಚಿತ್ರದುರ್ಗದ ಖಾಸಗಿ ಬಸ್‌ ನಿಲ್ದಾಣದ ಸಮೀಪ ತರಕಾರಿ ಮಾರುಕಟ್ಟೆಗೆ ನಿರ್ಮಿಸಿದ ಸಂತೆಕಟ್ಟೆ ಪಾಳುಬಿದ್ದಿದೆ   

ಚಿತ್ರದುರ್ಗ: ಇಲ್ಲಿನ ಖಾಸಗಿ ಬಸ್‌ ನಿಲ್ದಾಣದ ಸಮೀಪ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಂತೆಕಟ್ಟೆಗೆ ತರಕಾರಿ ವ್ಯಾಪಾರಸ್ಥರು ಸ್ಥಳಾಂತರಗೊಳ್ಳದ ಪರಿಣಾಮ ನೂತನ ಕಟ್ಟಡ ಪಾಳುಬಿದ್ದಿದೆ. ಅನೈತಿಕ ಚಟುವಟಿಕೆ, ಬಿಡಾಡಿ ದನಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಬೀದಿ ಬದಿಯಲ್ಲಿರುವ ವ್ಯಾಪಾರಸ್ಥರು ಸಂತೆಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟೆಗಳನ್ನು ಹರಾಜು ಮಾಡಿ ವರ್ಷ ಕಳೆದರೂ ಕಾರ್ಯಾರಂಭವಾಗಿಲ್ಲ. ರಸ್ತೆ ಬದಿ ತರಕಾರಿ ಮಾರಾಟಕ್ಕೆ ಕಡಿವಾಣ ಹಾಕಲು ನಗರಸಭೆಗೆ ಈವರೆಗೆ ಸಾಧ್ಯವಾಗಿಲ್ಲ.

ಗಾಂಧಿ ವೃತ್ತ, ಮೆದೆಹಳ್ಳಿ ರಸ್ತೆ, ಸಂತೆಹೊಂಡ ಸೇರಿ ನಗರದ ಹೃದಯ ಭಾಗದ ಹಲವು ಬೀದಿಗಳಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ಬೆಳಿಗ್ಗೆ 6ಕ್ಕೆ ಆರಂಭವಾಗುವ ವ್ಯಾಪಾರ ಸಂಜೆಯವರೆಗೂ ನಡೆಯುತ್ತದೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಂತೆಮೈದಾನದಲ್ಲಿ ನೂತನ ಮಳಿಗೆ ನಿರ್ಮಾಣಕ್ಕೆ ನಗರಸಭೆ ಏಳು ವರ್ಷಗಳ ಹಿಂದೆ ಯೋಜನೆ ರೂಪಿಸಿತ್ತು.

ADVERTISEMENT

ಕಸದ ತೊಟ್ಟಿಯಾದ ಕಟ್ಟೆ:ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಂತೆಕಟ್ಟೆ ನಿರ್ಮಿಸಲಾಗಿದೆ. 102 ಕಟ್ಟೆಗಳ ಮೇಲೆ ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಮಳೆ, ಗಾಳಿ, ಬಿಸಿಲಿನಿಂದ ವ್ಯಾಪಾರಸ್ಥರಿಗೆ ರಕ್ಷಣೆ ಒದಗಿಸುತ್ತದೆ. ಗ್ರಾಹಕರ ಓಡಾಟ, ತರಕಾರಿ ಸರಬರಾಜಿಗೂ ಸ್ಥಳಾವಕಾಶ ಕಲ್ಪಿಸಲಾಗಿದೆ.

ಜನಪ್ರತಿನಿಧಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಹಲವು ವರ್ಷ ಈ ಕಟ್ಟೆ ನನೆಗುದಿಗೆ ಬಿದ್ದಿತ್ತು. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಒತ್ತಡ ಹೆಚ್ಚಾದ ಬಳಿಕ ವರ್ಷದ ಹಿಂದೆ ಇವುಗಳನ್ನು ಹರಾಜು ಹಾಕಲಾಯಿತು. ಪ್ರತಿ ಕಟ್ಟೆಗೆ ಮಾಸಿಕ ₹ 10ರಿಂದ ₹ 15 ಸಾವಿರ ಬಾಡಿಗೆಗೆ ವ್ಯಾಪಾರಸ್ಥರು ಹರಾಜು ಕೂಗಿದರು. ಆದರೆ, ಯಾರೊಬ್ಬರೂ ಇಲ್ಲಿಗೆ ಸ್ಥಳಾಂತರಗೊಳ್ಳಲಿಲ್ಲ.

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂತೆಕಟ್ಟೆ ಅನೈರ್ಮಲ್ಯ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿದೆ. ತರಕಾರಿ ತ್ಯಾಜ್ಯ ಸೇರಿದಂತೆ ಮಾರುಕಟ್ಟೆಯ ಕಸವನ್ನು ಇಲ್ಲಿ ಸುರಿಯಲಾಗುತ್ತಿದೆ. ಹಸಿ ಕಸ ಕೊಳೆತು ದುರ್ವಾಸನೆ ಹರಡುತ್ತಿದೆ. ಸುತ್ತಲಿನ ಬಡಾವಣೆಯ ನಿವಾಸಿಗಳು ಹಾಗೂ ಅಂಗಡಿಗಳಿಗೆ ಇದರಿಂದ ತೊಂದರೆ ಉಂಟಾಗಿದೆ. ಕಟ್ಟೆ ಮುಂಭಾಗದ ಬೀದಿಗಳು ಕಸ, ಸೆಗಣಿ ಹಾಗೂ ಕೆಸರುಮಯವಾಗಿದೆ. ಕೆಲವರು ರಾತ್ರಿ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಾರೆ.

ಬಾಡಿಗೆ ಹೆಚ್ಚಳ ಆರೋಪ:ಸಂತೆಕಟ್ಟೆ ಬಾಡಿಗೆ ಪಡೆದರೂ ಏಕೆ ಸ್ಥಳಾಂತರಗೊಂಡಿಲ್ಲ ಎಂಬ ಪ್ರಶ್ನೆಗೆ ವ್ಯಾಪಾರಸ್ಥರು ನೀಡುವ ಉತ್ತರವೇ ಬೇರೆ. ಕಟ್ಟೆಗಳಿಗೆ ಹರಾಜಿನ ಮೂಲಕ ನಗರಸಭೆ ನಿಗದಿಪಡಿಸಿದ ಬಾಡಿಗೆ ವಿಪರೀತವಾಗಿದೆ ಎಂಬುದು ಬಹುತೇಕ ಎಲ್ಲರ ಆರೋಪ.

‘ಹೂವಿನ ಮಾರುಕಟ್ಟೆಗೆ ನಿರ್ಮಿಸಿದ ಮಳಿಗೆಗೆ ಮಾಸಿಕ ₹ 3 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಚಾವಣಿಯಷ್ಟೇ ಇರುವ ಸಂತೆಕಟ್ಟೆಗೆ ₹ 10 ಸಾವಿರಕ್ಕೂ ಹೆಚ್ಚು ಬಾಡಿಗೆ ನಿಗದಿಪಡಿಸುವುದು ಯಾವ ನ್ಯಾಯ’ ಎಂಬುದು ಸಂತೆಹೊಂಡ ಸಮೀಪದ ಅರಳಿಕಟ್ಟೆಯಡಿ ಕೂರುವ ಮಹಿಳಾ ವ್ಯಾಪಾರಿ ಲಕ್ಷ್ಮಮ್ಮ ಅವರ ಪ್ರಶ್ನೆ.

‘ಕಟ್ಟೆಗಳನ್ನು ಹರಾಜು ಕರೆಯುವುದಕ್ಕೂ ಮೊದಲು ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡುವುದಾಗಿ ನಗರಸಭೆ ಬೆದರಿಕೆ ಹಾಕಿತು. ವ್ಯಾಪಾರ ಉಳಿಸಿಕೊಳ್ಳುವ ಧಾವಂತದಲ್ಲಿ ಹೆಚ್ಚು ಬಾಡಿಗೆಗೆ ಕಟ್ಟೆಗಳನ್ನು ಹಿಡಿದುಕೊಂಡಿದ್ದಾರೆ. ದುಬಾರಿ ಬಾಡಿಗೆ ಕಟ್ಟುವುದು ತರಕಾರಿ ವ್ಯಾಪಾರಸ್ಥರಿಗೆ ಕಷ್ಟ’ ಎನ್ನುತ್ತಾರೆ ವ್ಯಾಪಾರಿ ಅಡಿಕೆ ಈಶಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.