ADVERTISEMENT

ರೈಲ್ವೆ ಸೇತುವೆ ಬಳಿ ಸಂಚಾರ ತೊಡಕು; ಮಳೆನೀರು ಚರಂಡಿಗೆ ಹಾಕಿದ ಕಂಬಿ ಮುರಿದಿವೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:00 IST
Last Updated 7 ಏಪ್ರಿಲ್ 2019, 20:00 IST
ಚಿತ್ರದುರ್ಗ–ತುರುವನೂರು ರಸ್ತೆಯ ರೈಲ್ವೆ ಸೇತುವೆ ಬಳಿ ಮುರಿದ ಕಂಬಿಯ ಮೇಲೆ ಸಾಗಿದ ವಾಹನ
ಚಿತ್ರದುರ್ಗ–ತುರುವನೂರು ರಸ್ತೆಯ ರೈಲ್ವೆ ಸೇತುವೆ ಬಳಿ ಮುರಿದ ಕಂಬಿಯ ಮೇಲೆ ಸಾಗಿದ ವಾಹನ   

ಚಿತ್ರದುರ್ಗ: ತುರುವನೂರು ರಸ್ತೆಯ ರೈಲ್ವೆ ಮೇಲ್ಸೇತುವೆ ಸಮೀಪ ರಸ್ತೆಗೆ ಹಾಕಿದ ಕಬ್ಬಿಣದ ಸರಳುಗಳು ಕಿತ್ತು ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಅಪಾಯ ದಾಟಿಕೊಂಡು ಸಂಚರಿಸಬೇಕಾಗಿದೆ.

ಸೇತುವೆ ಕೆಳಭಾಗದಲ್ಲಿ ಮಳೆ ನೀರು ಸುಗಮವಾಗಿ ಹರಿದು ಹೋಗಲು ನಿರ್ಮಿಸಿದ ಚರಂಡಿಯೇ ಕಂಟಕವಾಗಿದೆ. ಚರಂಡಿಗೆ ಹಾಕಿದ ಕಬ್ಬಿಣದ ಕಂಬಿಗಳು ಸಂಪೂರ್ಣ ಹಾಳಾಗಿವೆ. ವೇಗವಾಗಿ ಬರುವ ವಾಹನ ಸವಾರರ ಪ್ರಾಣಕ್ಕೆ ಇವು ಎರವಾಗುತ್ತಿವೆ. ಕಂಬಿಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿಗೆ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ಚಿತ್ರದುರ್ಗ–ಹೊಸಪೇಟೆ–ಗುಂತ್ಕಲ್‌ ರೈಲು ಮಾರ್ಗಕ್ಕೆ ತುರುವನೂರು ರಸ್ತೆ ಬಳಿ ಮೇಲ್ಸೇತುವೆ ನಿರ್ಮಿಸಲಾಗಿದೆ. ರೈಲ್ವೆ ಗೇಟು ತೆರವುಗೊಳಿಸಿ ಮೂರು ವರ್ಷಗಳ ಹಿಂದೆ ಈ ಸೇತುವೆ ಕಟ್ಟಲಾಗಿದೆ. ಚಿತ್ರದುರ್ಗ–ತುರುವನೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಇದು ಅನುಕೂಲವಾಗಿದೆ. ಆದರೆ, ಸೇತುವೆ ಸಮೀಪ ಹಾಳಾಗಿರುವ ರಸ್ತೆ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.

ADVERTISEMENT

ರೈಲ್ವೆ ಮೇಲ್ಸೇತುವೆಯ ಬಳಿ ಹಾದುಹೋಗಿರುವ ರಸ್ತೆ ಮಾರ್ಗ ಗೋನೂರು, ಹೋ.ಚಿ.ಬೋರಯ್ಯ ಬಡಾವಣೆ, ಬಚ್ಚಬೋರಹನಟ್ಟಿ, ಬೊಮ್ಮೆನಹಳ್ಳಿ, ಹಂಪಯ್ಯನಮಾಳಿಗೆ, ಹಾಯ್ಕಲ್, ಬೆಳಗಟ್ಟ, ತುರುವನೂರು, ನಾಯಕನಹಟ್ಟಿ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನ, ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ.

ಚಿತ್ರದುರ್ಗ ನಗರದ ಸಮೀಪದ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಈ ಭಾಗದ ರೈತರು ಹೂವು, ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆ ಅನುಕೂಲಕರವಾಗಿದೆ.

‘ತಿರುವು ಇರುವ ಸ್ಥಳದಲ್ಲೇ ಸೇತುವೆ ನಿರ್ಮಿಸಿದ್ದರಿಂದ ಎದುರಿಗೆ ಬರುವ ವಾಹನಗಳು ಕಣ್ಣಿಗೆ ಕಾಣುವುದಿಲ್ಲ. ಎರಡೂ ಬದಿ ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳು ಚರಂಡಿಯ ಬಳಿ ನಿಧಾನಕ್ಕೆ ಸಾಗುತ್ತವೆ. ಮಳೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿಗೆ ಹಾಕಿದ ಸರಳು ಹಾಳಾಗಿ ವರ್ಷ ಕಳೆದಿದೆ. ಇವುಗಳನ್ನು ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ’ ಎಂಬುದು ಹಾಯ್ಕಲ್‌ ಗ್ರಾಮದ ಬಸವರಾಜ್‌ ಅವರ ಆರೋಪ.

‘ಬಸ್‌, ಲಾರಿ ಸೇರಿ ಭಾರಿ ವಾಹನಗಳು ಸಾಗುತ್ತವೆ. ದ್ವಿಚಕ್ರ ವಾಹನ, ಕಾರು, ಆಟೊ ಹಾಗೂ ಸಣ್ಣ ಪ್ರಮಾಣದ ಸರಕು ಸಾಗಣೆ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ರಾತ್ರಿ ಸಮಯದಲ್ಲಿ ಸೇತುವೆ ಹಾದು ಹೋಗುವುದು ಇನ್ನೂ ಕಷ್ಟವಾಗಿದೆ. ಮುಂಭಾಗದಲ್ಲಿ ಬರುವ ವಾಹನಗಳ ಬೆಳಕಿನಿಂದ ರಸ್ತೆ ಸರಿಯಾಗಿ ಗೋಚರಿಸುವುದಿಲ್ಲ. ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ’ ಎನ್ನುತ್ತಾರೆ ಗೋನೂರಿನ ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.