ADVERTISEMENT

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಜೆ.ಪಿ.ನಡ್ಡಾ ತೀರ್ಮಾನ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 6:36 IST
Last Updated 24 ಜುಲೈ 2021, 6:36 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.   

ಚಿತ್ರದುರ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬಿಜೆಪಿಯಲ್ಲಿ ಮಿತ್ರ ಮಂಡಳಿ ಇಲ್ಲ. 17 ಶಾಸಕರು ಬಿಜೆಪಿ ಟಿಕೆಟ್ ಪಡೆದು ಗೆದ್ದಿದ್ದಾರೆ. ಅವರಲರೆಲ್ಲರೂ ಪಕ್ಷದ ಭಾಗವಾಗಿ ಇದ್ದಾರೆ. ಅವರು ಪಕ್ಷದ ಹೈಕಮಾಂಡ್ ಗೆ ಬದ್ದವಾಗಿ ಇರುವುದಾಗಿ ಹೇಳಿದ್ದಾರೆ ಎಂದರು.

ADVERTISEMENT

'ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ' ಎಂಬ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, 'ಅತಿಹೆಚ್ಚು ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅಂಬೇಡ್ಕರ್ ಸೋಲಿಸಿದರು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು ಎಂದು ತಿರುಗೇಟು ನೀಡಿದರು.

ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಗೆ ಬಂದು ಮುಖ್ಯಮಂತ್ರಿಯಾದರು. ಡಾ.ಜಿ.ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಳೆಯಲು ಬಿಡಲಿಲ್ಲ. ದಲಿತ ನಾಯಕರಾದ ಖರ್ಗೆ, ಬಿ.ಎನ್.ಚಂದ್ರಪ್ಪ ಹಾಗೂ ಧ್ರುವನಾರಾಯಣ ಅವರನ್ನು ಸೋಲಿಸಿದರು. ಪರಮೇಶ್ವರ ಅವರನ್ನು ಉಪಮುಖ್ಯಂತ್ರಿ ಮಾಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದೆ. ಮುಸ್ಲಿಂ ಸಮಯದಾಯದ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದೇವೆ. ದಲಿತರಾದ ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಗೋವಿಂದ್ ಕಾರಜೋಳ ಅವರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತಿದ್ದ ಎ.ನಾರಾಯಣಸ್ವಾಮಿಅವರನ್ನು ಚಿತ್ರದುರ್ಗದಲ್ಲಿ ಸಂಸದರನ್ನಾಗಿ ಮಾಡಿ ಸಚಿವ ಸ್ಥಾನ ನೀಡಿದ್ದೇವೆ ಎಂದು ಹೇಳುದರು.

ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾರು ಮಾಡಿಲ್ಲ. ಸಿದ್ಧರಾಮಣ್ಣ ಅರ್ಕಾವತಿ ಹಗರಣ ಮುಚ್ಚಿ ಹಾಕಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.