ADVERTISEMENT

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ: ಕೆ.ಎಸ್‌.ನವೀನ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 13:45 IST
Last Updated 24 ಜನವರಿ 2024, 13:45 IST
ಚಿತ್ರದುರ್ಗ ನಗರದ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‌ಬುಕ್‌ ವಿತರಣೆ ಕಾರ್ಯಕ್ರಮವನ್ನು ಮಕ್ಕಳ ಜತೆ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಉದ್ಘಾಟಿಸಿದರು
ಚಿತ್ರದುರ್ಗ ನಗರದ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‌ಬುಕ್‌ ವಿತರಣೆ ಕಾರ್ಯಕ್ರಮವನ್ನು ಮಕ್ಕಳ ಜತೆ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಉದ್ಘಾಟಿಸಿದರು   

ಚಿತ್ರದುರ್ಗ: ಮಹಿಳೆಯರ ಕಾರ್ಯವ್ಯಾಪ್ತಿ ಇಲ್ಲದೇ ಇರುವ ಯಾವುದೇ ಕ್ಷೇತ್ರಗಳು ನಮ್ಮ ದೇಶದಲ್ಲಿ ಇಲ್ಲ. ಪ್ರತಿ ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಅಭಿಪ್ರಾಪಟ್ಟರು.

ನಗರದ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‌ಬುಕ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಈ ಮೂಲಕ ಸಮಾಜದಲ್ಲಿ ಎಲ್ಲರೆದುರು ಸಮಾನವಾಗಿ ನಿಲ್ಲುವಂತೆ ಮಾಡಬೇಕು’ ಎಂದರು.

‘ಶಿಕ್ಷಣ, ಸಾಮಾಜಿಕ, ಆಡಳಿತ, ರಾಜಕೀಯ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಇದ್ದಾರೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಎಲ್ಲರೂ ಹೆಮ್ಮೆಪಡುವ ಸಂಗತಿ’ ಎಂದು ತಿಳಿಸಿದರು.

ADVERTISEMENT

‘ಈ ಹಿಂದೆ ಮಹಿಳೆಯರನ್ನು ಅಬಲೆಯಾಗಿ ನೋಡುತ್ತಿದ್ದರು. ಪುರುಷನೊಬ್ಬ ಆಧಾರವಾಗಿ ಇರಬೇಕು ಎಂದು ಭಾವಿಸಿದ್ದರು. ಆದರೆ, ಈಗಿನ ಸಮಾಜ ಬದಲಾಗಿದೆ. ಇಲ್ಲಿ ಗೌರವಯುತವಾಗಿ ಬದುಕಲು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಶಕ್ತಿ ನೀಡಬೇಕು. ಮಾನಸಿಕವಾಗಿ ಸದೃಢರಾಗಿ ಇರುವಂತೆ ಬೆಳೆಸಬೇಕು’ ಎಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಹೆಣ್ಣು ನಮಗೆ ಭಾರವಲ್ಲ. ನಮಗೆ ಮಾರ್ಗದರ್ಶಕಿ, ದೇಶದ ಕಣ್ಣು. ನೀರು ಇಲ್ಲದೆ ಹೋದರೆ ಜೀವ ಇಲ್ಲ. ಹಾಗೇ ಹೆಣ್ಣು ಮಕ್ಕಳು ಇಲ್ಲದೇ ಮಾನವ ಸಮಾಜಕ್ಕೆ ಅಸ್ತಿತ್ವವೇ ಇಲ್ಲ. ಮಮತೆ, ಕರುಣೆ ಹಾಗೂ ಪ್ರೀತಿಯಿಂದ ಬೆಳೆಸಿದರೆ ಅವರು ಸಮಾಜದ ಕಣ್ಣಾಗುತ್ತಾರೆ’ ಎಂದರು.

‘ಇಂದಿನ ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಜಾಗೃತರಾಗಿದ್ದಾರೆ. ಇದಕ್ಕೆ ಕಾರಣ ಶಿಕ್ಷಣ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ‘ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನ ರೀತಿಯಲ್ಲಿ ಬೆಳೆಸಬೇಕು. ಶಿಕ್ಷಣ ಸೇರಿದಂತೆ ಎಲ್ಲ ಸವಲತ್ತುಗಳನ್ನು ನೀಡಿದರೆ, ಅವರೂ ಉತ್ತಮ ಸಾಧನೆ ತೋರುತ್ತಾರೆ’ ಎಂದರು.

ಬಾಲ ನ್ಯಾಯ ಮಂಡಳಿ ಸದಸ್ಯೆ ಸುಮನಾ ಎಸ್‌.ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್‌.ಬಣಕಾರ್‌, ಸಹಾಯಕ ನಿರ್ದೇಶಕಿ ಪವಿತ್ರಾ, ತಹಶೀಲ್ದಾರ್‌ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಎನ್‌.ಸುಧಾ, ವಿ.ಮಂಜುಳ ಇದ್ದರು.‌

ಸಾಧಕ ಮಕ್ಕಳಿಗೆ ಸನ್ಮಾನ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ವಿಶೇಷ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು. ಎಚ್‌.ಎಸ್‌.ಜಯಂತ್ ಕೆ.ಸಿ.ಪೃಥ್ವಿ ಜಿ.ಆರ್‌.ರಮ್ಯ ಮೊಹಮ್ಮದ್‌ ಸಫ್ವಾನ್‌ ಖಾನ್‌ ಎಸ್‌.ಬಿ.ಸಿಂಧು ಕೆ.ಪಿ.ಎಂ.ಗುರುದೇವ ಪಿ.ಪದ್ಮಾವತಿ ಲವ.ಟಿ.ವಡಕಲ್ ಅವರಿಗೆ ತಲಾ ₹10000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಎಸ್‌.ಪಿ.ದಯಾನಿಧಿ ಎಸ್‌.ಸಾಯಿ ಸಂಕೀರ್ತನಾ ರಕ್ಷಾ ಟಿ.ಬೆಲಗೂರು ಜಿ.ಸಹನಾ ಎನ್‌.ಉಷಾ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.