
ನಾಯಕನಹಟ್ಟಿ: ಪಟ್ಟಣದ ಚನ್ನಬಸಯ್ಯನಹಟ್ಟಿಯ ಗ್ರಾಮದೈವ ಆಂಜನೇಯಸ್ವಾಮಿ ದೇವರ ರಥೋತ್ಸವ ಶನಿವಾರ ಸಡಗರದಿಂದ ನಡೆಯಿತು.
ಹಳೆ ಚನ್ನಬಸಯ್ಯನಹಟ್ಟಿ, ಹೊಸ ಚನ್ನಬಯ್ಯನಹಟ್ಟಿ, ಕೊಂಡಯ್ಯನಕಪಿಲೆ, ಗಂಗಯ್ಯನಹಟ್ಟಿ ಗ್ರಾಮಸ್ಥರು ಶುಕ್ರವಾರ ಬೆಳಿಗ್ಗಿನಿಂದಲೇ ವಿವಿಧ ಪೂಜೆ ಕೈಗೊಂಡು ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಶನಿವಾರ ಬೆಳಿಗ್ಗೆ ಸಂಪ್ರದಾಯದಂತೆ ರಥ ನಿರ್ಮಿಸಿದರು. ಹೂ ಮತ್ತು ಬಣ್ಣದ ಬಾವುಟಗಳಿಂದ ರಥವನ್ನು ಅಲಂಕರಿಸಿ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಸಂಜೆ 4 ಗಂಟೆಗೆ ಗುಡಿಯಿಂದ ಆಂಜನೇಯಸ್ವಾಮಿ ಉತ್ಸವಮೂರ್ತಿಯನ್ನು ರಥದ ಬಳಿ ಕರೆತಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಗ್ರಾಮದ 5 ಜನ ಆಯಗಾರರು ರಥಕ್ಕೆ ಬಲಿ ಅನ್ನದ ಎಡೆಯನ್ನು ಅರ್ಪಿಸಿ ಮಂಗಳಾರತಿ ಮಾಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥ ಸಾಗುವ ಮಾರ್ಗದುದ್ದಕ್ಕೂ ರಥಕ್ಕೆ ಚೂರುಬೆಲ್ಲ, ಮೆಣಸು, ಹೂವನ್ನು ಅರ್ಪಿಸಿದರು. ಹಳೆ ಚನ್ನಬಸಯ್ಯನ ಹಟ್ಟಿಯಲ್ಲಿ ಸಾಗಿದ ರಥವನ್ನು ಗ್ರಾಮದ ಗಡಿಭಾಗದ ಪಾದಗಟ್ಟೆಯವರೆಗೂ ಭಕ್ತರು ಎಳೆದು ತಂದು ಪೂಜೆ ಸಲ್ಲಿಸಿದರು.
ರಥ ಸಾಗುವ ಮಾರ್ಗದಲ್ಲಿ ವಿವಿಧ ವಾದ್ಯಗಳು ಹಾಗೂ ನಂದಿಕೋಲು ಆಕರ್ಷಕವಾಗಿದ್ದವು. ರಥೋತ್ಸವದ ನಂತರ ಸಂಪ್ರದಾಯದಂತೆ ದೇವರ ಮೇಲಿದ್ದ ಹೂವಿನ ಹಾರಗಳನ್ನು ಹರಾಜು ಮಾಡಲಾಯಿತು. ರಥೋತ್ಸವದ ವೇಳೆ ಪ್ರಸಾದವಾಗಿ ಪಾನಕ, ರಸಾಯನ, ಸಕ್ಕರೆ, ಬಾಳೆಹಣ್ಣು, ಅವಲಕ್ಕಿಯನ್ನು ವಿತರಿಸಲಾಯಿತು. ಅಂತಿಮವಾಗಿ ಸಂಜೆ 6 ಗಂಟೆಗೆ ರಥದಿಂದ ದೇವರ ಉತ್ಸವ ಮೂರ್ತಿಯನ್ನು ಇಳಿಸಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗುಡಿದುಂಬಿಸಲಾಯಿತು.
ರಥೋತ್ಸವ ಸಂಪ್ರದಾಯವು 75 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದು ಬರುತ್ತಿದ್ದು, ಮುಂದಿನ ವರ್ಷ ನೂತನ ರಥ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲರೂ ಕಂಕಣಬದ್ಧರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.