ADVERTISEMENT

ನಾಯಕನಹಟ್ಟಿ: ಪೌರಕಾರ್ಮಿಕರ ಖುಷಿ ಕಿತ್ತುಕೊಂಡ ‘ಖುಷ್ಕಾ’ ಪೂರೈಕೆ!

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 4:24 IST
Last Updated 28 ಜೂನ್ 2022, 4:24 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಹೋಟೆಲ್‍ನಲ್ಲಿ ಬೆಳಗಿನ ಉಪಾಹಾರವಾಗಿ ಕುಷ್ಕಾ ಸಾಂಬಾರ್ ಸೇವಿಸುತ್ತಿರುವುದು.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಹೋಟೆಲ್‍ನಲ್ಲಿ ಬೆಳಗಿನ ಉಪಾಹಾರವಾಗಿ ಕುಷ್ಕಾ ಸಾಂಬಾರ್ ಸೇವಿಸುತ್ತಿರುವುದು.   

ನಾಯಕನಹಟ್ಟಿ: ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರಿಗೆ ಬೆಳಗಿನ ವೇಳೆ ಗುಣಮಟ್ಟದ ಉಪಾಹಾರ ನೀಡಲು ಇಲ್ಲಿಯ ಸ್ಥಳೀಯ ಆಡಳಿತ ವಿಫಲವಾಗಿದೆ.

ಬಿಬಿಎಂಪಿಯನ್ನು ಹೊರತುಪಡಿಸಿ ರಾಜ್ಯದ ಪ್ರತಿಯೊಂದು ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾಯಂ, ನೇರಪಾವತಿ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬೆಳಿಗ್ಗೆ ಪೌಷ್ಟಿಕ ಹಾಗೂ ಗುಣಮಟ್ಟದ ಉಪಾಹಾರ ನೀಡಬೇಕು ಎಂದು 2012ರಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಪ್ರತಿ ಕಾರ್ಮಿಕರಿಗೂ ನಿತ್ಯ ₹ 20 ಮೀರದಂತೆ ಅನುದಾನ ನಿಗದಿಗೊಳಿಸಿತ್ತು. ಇದರ ವೆಚ್ಚವನ್ನು ಆಯಾ ನಗರ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮದ ನಿಧಿಯ ಶೇ 22.75ರ ಅಡಿ ಭರಿಸಬೇಕು. ಸಾಮಾನ್ಯ ವರ್ಗದ ಪೌರ ಕಾರ್ಮಿಕರಿಗೆ ಸಂಸ್ಥೆಗಳ ಸಾಮಾನ್ಯ ನಿಧಿಯಿಂದ ಭರಿಸಬೇಕು’ ಎಂದು ಆದೇಶನೀಡಿತ್ತು.

ADVERTISEMENT

ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ಥಳೀಯ ಹೋಟೆಲ್‍ನಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ದಿನ ಕಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್‍ನವರು ವಿತರಿಸುತ್ತಿದ್ದ ತಿಂಡಿಯ ಗುಣಮಟ್ಟ ಮತ್ತು ಪ್ರಮಾಣ ಕಡಿಮೆ ಮಾಡಿದ್ದರು. ಈ ಕುರಿತು ಕೆಲವು ಕಾರ್ಮಿಕರು ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಪಟ್ಟಣ ಪಂಚಾಯಿತಿಯು ಏಜೆನ್ಸಿ ಮೂಲಕ ಉಪಾಹಾರ ಸರಬರಾಜು ಮಾಡಲು ಗುತ್ತಿಗೆ ನೀಡಿತು.

ಆದರೆ ಆ ಏಜೆನ್ಸಿಯಿಂದಲೂ ಕಳಪೆ ಆಹಾರ ಪೂರೈಸುವ ಪರಿಪಾಠ ಮುಂದುವರಿದಿದೆ. ಇದರಿಂದ ಪೌರಕಾರ್ಮಿಕರು ಬೇಸತ್ತು ವಿಧಿಯಿಲ್ಲದೇ ಅದನ್ನೇ ಸೇವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

₹ 35 ಭತ್ಯೆ ನಿಗದಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸರ್ಕಾರವು 2022ರ ಏಪ್ರಿಲ್ 4ರಂದು ಪರಿಷ್ಕೃತ ದರ ಘೋಷಿಸಿದೆ. ಅದರಂತೆ ₹ 20 ಇದ್ದ ಉಪಾಹಾರ ಭತ್ಯೆಯನ್ನು ₹ 35ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹಣವನ್ನು ಸ್ಥಳೀಯ ಸಂಸ್ಥೆಗಳು ಸರ್ಕಾರಿ ಅನುದಾನದಲ್ಲಿ ಭರಿಸಬೇಕು ಎಂದುಸೂಚಿಸಲಾಗಿದೆ.

ಈ ಆದೇಶದ ಅನ್ವಯ ನಿತ್ಯ ತರಹೇವಾರಿ, ಗುಣಮಟ್ಟದ, ಪೌಷ್ಟಿಕ ಉಪಾಹಾರದ ಜತೆಗೆ ತಲಾ ಒಂದು ಮೊಟ್ಟೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ 12 ಕಾಯಂ ಪೌರ ಕಾರ್ಮಿಕರು, 7 ನೇರಪಾವತಿ ಪೌರ ಕಾರ್ಮಿಕರು, 4 ಲೋಡರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ನೀಡಲು ಇನ್ನೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ.

ನಿತ್ಯ ಬೆಳಗಿನ ಜಾವ ಕೆಲಸ ಆರಂಭಿಸುವ ಪೌರಕಾರ್ಮಿಕರು ಬೆಳಿಗ್ಗೆ 8ಕ್ಕೆ ಉಪಾಹಾರಕ್ಕೆಂದು ಗುತ್ತಿಗೆ ಏಜೆನ್ಸಿ ನಿಗದಿಪಡಿಸಿರುವ ಹೋಟೆಲ್‍ಗೆ ಬಂದರೆ ಅಲ್ಲಿ ಬರೀ ಖುಷ್ಕಾ– ಸಾಂಬಾರ್ ನೀಡುತ್ತಾರೆ. ಮೊಟ್ಟೆಯನ್ನೂ ನೀಡುವುದಿಲ್ಲ. ನಿತ್ಯವೂ ಒಂದೇ ರೀತಿಯ ತಿಂಡಿ ಸೇವಿಸಿ ಸಾಕಾಗಿ ಹೋಗಿದೆ ಎಂದು ಪೌರಕಾರ್ಮಿಕರಾದ ತಿಪ್ಪೇಸ್ವಾಮಿ, ಕಾಶೀನಾಥ್, ದುರುಗೇಶ್, ಹನುಮಂತಪ್ಪ, ಯಲ್ಲಪ್ಪ ಅಳಲು ತೋಡಿಕೊಳ್ಳುತ್ತಾರೆ.

ಸ್ಥಳೀಯ ಆಡಳಿತವು ಪೌರ ಕಾರ್ಮಿಕರ ಉಪಾಹಾರಕ್ಕೆಂದು ವರ್ಷಕ್ಕೆ ₹ 9.20 ಲಕ್ಷ ಖರ್ಚು ಮಾಡುತ್ತಿದ್ದರೂ ಗುಣಮಟ್ಟದ, ಪೌಷ್ಟಿಕ ಆಹಾರ ದೊರೆಯದಂತಾಗಿದೆ.

**

ಪೌರ ಕಾರ್ಮಿಕರಿಗೆ ಸರ್ಕಾರಿ ಆದೇಶದಂತೆ ಗುಣಮಟ್ಟದ, ರುಚಿಯಾದ ಉಪಾಹಾರ ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ಪ್ರತಿಭಟಿಸಬೇಕಾಗುತ್ತದೆ.
-ಜೆ.ಆರ್. ರವಿಕುಮಾರ್, 9ನೇ ವಾರ್ಡ್ ಸದಸ್ಯ

**

ಮಾರ್ಚ್ 31ಕ್ಕೆ ಗುತ್ತಿಗೆದಾರರ ಅವಧಿ ಮುಕ್ತಾಯವಾಗಿದೆ. ಈ ವರ್ಷಕ್ಕೆ ಉಪಾಹಾರ ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಎಲ್ಲ 21 ಪೌರಕಾರ್ಮಿಕರಿಗೆ ಗುಣಮಟ್ಟದ ರುಚಿ–ಶುಚಿಯಾದ ತಿಂಡಿ ವ್ಯವಸ್ಥೆ ಮಾಡಲಾಗುವುದು.
– ಎನ್.ಟಿ. ಕೋಡಿಭೀಮರಾಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.