ನಾಯಕನಹಟ್ಟಿ: ಪಟ್ಟಣ ಸೇರಿದಂತೆ ಹೋಬಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಾರಮ್ಮನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವತೆ ಗೌರಸಮುದ್ರ ಮಾರಮ್ಮನ ಜಾತ್ರೆಯ ನಂತರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಭಾದ್ರಪದ ಮಾಸದ ಪ್ರತಿ ಮಂಗಳವಾರದಂದು ಮಾರಮ್ಮನ ಹಬ್ಬ ಆಚರಿಸಲಾಗುತ್ತದೆ.
ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ದೊಡ್ಲು ಮಾರಮ್ಮ ದೇವಾಲಯದಲ್ಲಿ ಸೋಮವಾರ ರಾತ್ರಿಯಿಂದಲೇ ದೇವರಿಗೆ ಹೂವಿನ ಅಲಂಕಾರ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆದವು. ಮಂಗಳವಾರ ಬೆಳಿಗ್ಗೆ ನಾಗರಿಕರು, ಮಹಿಳೆಯರು ಹೂವು, ಹಣ್ಣುಕಾಯಿಗಳನ್ನು ದೇವಾಲಯಕ್ಕೆ ತರುತ್ತಿದ್ದರು. ಬೇವಿನ ಸೊಪ್ಪನ್ನು ಕೈಲಿ ಹಿಡಿದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪಟ್ಟಣದ ದಡ್ಲ ಮಾರಮ್ಮ ದೇವಾಲಯಕ್ಕೆ ಹರಕೆ ಹೊತ್ತರೆ ಸಿಡುಬು, ಜ್ವರ, ಅಮ್ಮ ಹೀಗೆ ಹಲವು ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆಯಿಂದ ಚಿಕ್ಕಮಕ್ಕಳನ್ನು ದೇವಾಲಯದ ಸುತ್ತಲು ಬೇವಿನ ಸೊಪ್ಪಿನ ಉಡುಗೆ ತೊಡಿಸಿ ಪ್ರದಕ್ಷಿಣೆ ಹಾಕಿಸುತ್ತಿದ್ದರು. ಹಾಗಾಗಿ ನೂರಾರು ಭಕ್ತರು ಪ್ರತಿವರ್ಷದಂತೆ ಹರಕೆಗಳನ್ನು ಹೊತ್ತು ದೇವಾಲಯಕ್ಕೆ ಬಂದು ಹರಕೆ ಪೂರೈಸಿದರು. ಹಾಗೇ ಪಟ್ಟಣದ ಬಹುತೇಕ ಕಡೆಗಳಲ್ಲಿ ಭರ್ಜರಿ ಬಾಡೂಟ ನಡೆಯಿತು.
ಇದೇವೇಳೆ ಅರ್ಚಕ ಬಸವರಾಜ, ಗ್ರಾಮಸ್ಥರಾದ ದಗಮುತಿಪ್ಪೇಸ್ವಾಮಿ, ದಳವಾಯಿ ರುದ್ರಮುನಿ, ಮಹಾಂತೇಶ, ವೆಂಕಟೇಶ, ಓಬಳೇಶ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.