ADVERTISEMENT

ಕನಕದಾಸ ಸಾಂಸ್ಕೃತಿಕ ಬದಲಾವಣೆಯ ಹರಿಕಾರ- ಸಿ.ಕೆ. ಮಹೇಶ್

ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಸಿ.ಕೆ. ಮಹೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 4:17 IST
Last Updated 12 ನವೆಂಬರ್ 2022, 4:17 IST
ಚಿತ್ರದುರ್ಗದಲ್ಲಿ ಕನಕದಾಸ ಭಾವಚಿತ್ರದ ಮೆರವಣಿಗೆ ಶುಕ್ರವಾರ ಭವ್ಯವಾಗಿ ನಡೆಯಿತು.
ಚಿತ್ರದುರ್ಗದಲ್ಲಿ ಕನಕದಾಸ ಭಾವಚಿತ್ರದ ಮೆರವಣಿಗೆ ಶುಕ್ರವಾರ ಭವ್ಯವಾಗಿ ನಡೆಯಿತು.   

ಚಿತ್ರದುರ್ಗ: ಜನರ ಒಳಿತಿಗಾಗಿ ಕೆರೆ–ಕಟ್ಟೆಗಳನ್ನು ನಿರ್ಮಿಸಿದ ಕನಕದಾಸರು ದಾಸ ಪರಂಪರೆಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಆಧ್ಯಾತ್ಮಿಕ ಸಾಧನೆ ಜೊತೆ ಸಾಮಾಜಿಕ ಸಮಾನತೆ ಸಾಧಿಸುವ ಮಹತ್ವಾಕಾಂಕ್ಷೆ ಅವರಲ್ಲಿತ್ತು. ಸಾಂಸ್ಕೃತಿಕ ಬದಲಾವಣೆಯ ನಾಯಕತ್ವವನ್ನು ಅವರು ವಹಿಸಿದ್ದರು ಎಂದು ಸಾಹಿತಿ ಪ್ರೊ.ಸಿ.ಕೆ. ಮಹೇಶ್ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಕನಕದಾಸರ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು.

‘ಕನಕ ದಾಸರಲ್ಲ, ಕೆಳ ವರ್ಗಗಳ ನಾಯಕ. ಅಧಿಕಾರವಿದ್ದ ವೇಳೆಯಲ್ಲಿ ಕನಕರಿಗೆ ಅಸ್ಪೃಶ್ಯತೆ ಸನ್ನಿವೇಶ ಎದುರಾಗಲಿಲ್ಲ. ಆದರೆ, ಅಧ್ಯಾತ್ಮ ಸಾಧನೆ ಮಾಡಲು ಹೊರಟ ಅವರಿಗೆ ಉಡುಪಿಯಲ್ಲಿ ಅಸ್ಪೃಶ್ಯತೆಯ ಕಹಿ ಅನುಭವವಾಯಿತು. ಕನಕದಾಸರಿಗೆ ಅವಮಾನ ಮಾಡಿದ ಸಿದ್ಧಾಂತ ಇಂದಿಗೂ ಇವೆ. ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಣೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬುದ್ಧ, ಶರಣ ಪರಂಪರೆಯ ಮುಂದುವರಿದ ಭಾಗವೇ ಕನಕದಾಸರ ಚಿಂತನೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ. ಈ ವಿಚಾರಧಾರೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕಿದೆ. ಶೋಷಿತ ಜಾತಿಗಳ ವಿಮೋಚಕರಾಗಿ ಕನಕದಾಸರನ್ನು ಬಿಂಬಿಸಬೇಕು. ಕನಕರನ್ನು ಒಂದು ಜಾತಿ ಸೀಮಿತಗೊಳಿಸುವ ವಿಚಾರ ಕೈ ಬಿಡಬೇಕು. ಕನಕ ಜಾತಿ ವ್ಯವಸ್ಥೆ ಬುಡುಮೇಲು ಮಾಡಲು ಹೊರಟ ನಾಯಕ’ ಎಂದು ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ಕನಕದಾಸರು ಒಂದು ಜಾತಿಗೆ ಸೀಮಿತರಾದವರಲ್ಲ. ಜಾತಿ ಪಂಥ ಮೀರಿದ ದಾರ್ಶನಿಕ. ಜಾತಿ ಪದ್ದತಿಯನ್ನು ನಿರ್ಮೂಲನೆಗೆ ಹೋರಾಟ ಮಾಡಿದವರು ಕನಕದಾಸರು. ನಗರದಲ್ಲಿ ಸರ್ಕಾರಿ ಜಾಗ ಲಭ್ಯವಿದ್ದರೆ ಸಮುದಾಯಕ್ಕೆ ಮಂಜೂರು ಮಾಡಲಾಗುವುದು. ಕುರುಬ ಸಮುದಾಯದ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ
ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ‘ಕನಕದಾಸರು ಹುಟ್ಟಿನಿಂದ ಶ್ರೇಷ್ಠರಾಗಲಿಲ್ಲ. ತಂದೆ ತಾಯಿಯ ಪ್ರೀತಿಯ ತಿಮ್ಮಪ್ಪನಾಗಿ, ವಿಜಯನಗರ ಸಾಮ್ರಾಜ್ಯದಲ್ಲಿ ತಿಮ್ಮಪ್ಪ ನಾಯಕನಾಗಿ ದುಡಿದರು. ಬದುಕಿನಲ್ಲಿ ಸಾಕಷ್ಟು ಬದಲಾವಣೆಗೊಂಡು ಸಮಾಜದ ಸುಧಾರಣೆಗಾಗಿ ಪ್ರಯತ್ನಿಸಿ, ಆಧ್ಯಾತ್ಮಿಕ ಅನುಭೂತಿ ಪಡೆದುಕೊಂಡು ದಾಸ ಶ್ರೇಷ್ಠರಾದರು’ ಎಂದು ಹೇಳಿದರು.

‘16ನೇ ಶತಮಾನದಲ್ಲಿ ಸಾಮಾಜಿಕ ಪರಿಸ್ಥಿತಿಯ ಬದಲಾವಣೆಗೆ ಪ್ರಯತ್ನಸಿದರು. ಈಗಲೂ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿ
ತಾರತಮ್ಯಗಳು ನಡೆಯುತ್ತವೆ. ಆದರೆ, ಕನಕದಾಸರು ಆತ್ಮ, ಜೀವ, ನೀರು, ಗಾಳಿ ಯಾವ ಕುಲ ಎಂದು ಪ್ರಶ್ನಿಸಿ, ಕುಲವ್ಯವಸ್ಥೆಯನ್ನು ತೊಡೆದು
ಹಾಕಲು ಪ್ರಯತ್ನಿಸಿದರು’ ಎಂದು ನುಡಿದರು.

ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಸದಸ್ಯರಾದ ಪಿ.ಕೆ.ಮೀನಾಕ್ಷಿ, ಮಲ್ಲಿಕಾರ್ಜುನ್, ಪೂಜಾ ಮಂಜುನಾಥ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಧಿಕಾರಿ ಆರ್.ಚಂದ್ರಯ್ಯ, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕರ್ನಾಟಕ ಪ್ರದೇಶ ಕುರುಬರ ಸಂಘ ಉಪಾಧ್ಯಕ್ಷ ಬಿ.ಟಿ.ಜಗದೀಶ್ ಇದ್ದರು.

ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದ ಕಲಾವಿದರು ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ತರಾಸು ರಂಗಮಂದಿರದವರೆಗೂ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.