ADVERTISEMENT

ಕಂದಾಯ ಗ್ರಾಮಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 4:57 IST
Last Updated 25 ನವೆಂಬರ್ 2022, 4:57 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮನುಮೈನಹಟ್ಟಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮನುಮೈನಹಟ್ಟಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಮನುಮೈನಹಟ್ಟಿಗೆ ಕಂದಾಯ ಗ್ರಾಮದ ಸ್ಥಾನ ಕಲ್ಪಿಸಬೇಕು ಎಂದು ಆಗ್ರಹಿಸಿ ಚಳ್ಳಕೆರೆ ತಾಲ್ಲೂಕಿನ ಮನುಮೈನಹಟ್ಟಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ಕಂದಾಯ ಗ್ರಾಮದ ಸ್ಥಾನಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಚಳ್ಳಕೆರೆ ತಾಲ್ಲೂಕಿನ ಎನ್.ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮನುಮೈನಹಟ್ಟಿಯಲ್ಲಿ 600ಕ್ಕೂ ಅಧಿಕ ಮನೆಗಳಿವೆ. ಸುಮಾರು 2,500 ಜನಸಂಖ್ಯೆ ಹೊಂದಿದ್ದು, ಲಂಬಾಣಿ, ಗೊಲ್ಲ, ಈಡಿಗ, ಕುರುಬ, ಸುಣಗಾರ, ಗಾಣಿಗ, ನಾಯಕ ಮತ್ತು ಮಾದಿಗ ಜನಾಂಗದ ಜನರು ವಾಸವಾಗಿದ್ದಾರೆ. ಕಂದಾಯ ಗ್ರಾಮವಾಗಿ ಪರಿಗಣಿಸುವಂತೆ ಚಳ್ಳಕೆರೆ ತಹಶೀಲ್ದಾರ್‌ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ADVERTISEMENT

ಹಾಡಿ, ಲಂಬಾಣಿಹಟ್ಟಿ, ಗೊಲ್ಲರಹಟ್ಟಿ, ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಮನುಮೈನಹಟ್ಟಿ ಈವರೆಗೆ ಕಂದಾಯ ಗ್ರಾಮವಾಗಿಲ್ಲ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ.ಜಯಂತಿ, ಎಚ್‌.ಶಿವಣ್ಣ, ಎಂ.ನಿರಂಜನ, ರೋಹಿಣಿ ಬಾಯಿ, ಶಾಂತಮ್ಮ ಗ್ರಾಮದ ಮುಖಂಡರಾದ ಕೆ.ತಿಪ್ಪೇಸ್ವಾಮಿ, ಟಿ.ತಿಪ್ಪೇಸ್ವಾಮಿ, ಪ್ರಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.