ADVERTISEMENT

ರಸ್ತೆ ಮುಚ್ಚಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:43 IST
Last Updated 4 ಡಿಸೆಂಬರ್ 2021, 3:43 IST
ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಕಿರಿದಾದ ರಸ್ತೆ ಮುಚ್ಚಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಕಿರಿದಾದ ರಸ್ತೆ ಮುಚ್ಚಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಇಲ್ಲಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಡಭಾಗದಲ್ಲಿರುವ ಕಿರಿದಾದ ರಸ್ತೆಯನ್ನು ಸಂಪೂರ್ಣ ಮುಚ್ಚುವಂತೆ ಒತ್ತಾಯಿಸಿ ಕಾಲೇಜು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಮೆರವಣಿಗೆ ನಡೆಸಿದರು. ಈ ವಿಚಾರವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.

ಕಾಲೇಜಿನ ಪಕ್ಕದಲ್ಲೇ ಇರುವ ಈ ರಸ್ತೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ಗಲೀಜು ಮತ್ತು ಕೊಳಚೆಯಿಂದ ಕೂಡಿದೆ. ಧೂಮಪಾನ, ಮದ್ಯ ಸೇವಿಸಲು ಅನೇಕರು ಇಲ್ಲಿ ತಿರುಗಾಡುತ್ತಲೇ ಇರುತ್ತಾರೆ. ಇದರಿಂದಾಗಿ ಆತಂಕ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಈ ಮಾರ್ಗವನ್ನು ಹೆಚ್ಚಾಗಿ ವಾಹನ ಸವಾರರು, ಪಾದಚರಿಗಳು ಬಳಸುತ್ತಿಲ್ಲ. ತ್ಯಾಜ್ಯವನ್ನು ತಂದು ಸುರಿಯುವ ತಾಣವಾಗಿದೆ. ಹಳೆಯ ಹಾಸಿಗೆ, ಬಳಸಿದ ಮಾಸ್ಕ್, ಸ್ಯಾನಿಟರಿ ಪ್ಯಾಡ್ ಹಾಗೂ ಅಸಹ್ಯ ವಸ್ತುಗಳನ್ನು ಕೆಲವರು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ವಾತಾವರಣ ಮತ್ತಷ್ಟು ಹದಗೆಟ್ಟಿದೆ ಎಂದು ದೂರಿದರು.

ಮಾರ್ಗದಲ್ಲಿ ಚರಂಡಿ ನೀರು ಹಾಗೂ ವಿದ್ಯಾರ್ಥಿನಿಲಯದ ಕೊಳಚೆ ನೀರು ಸಹ ಹರಿಯುತ್ತಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಯಲು ಶೌಚಕ್ಕೂ ಕೂಡ ಬಳಕೆಯಾಗುತ್ತಿದೆ. ಹೀಗಾಗಿ ಕಾಲೇಜಿನ ನೂತನ ಕಟ್ಟಡಕ್ಕೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರಸ್ತೆಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗಾಯತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.