ADVERTISEMENT

‘ಬಂಗಾರ’ದಂತಹ ಮಕ್ಕಳ ಭವಿಷ್ಯಕ್ಕೆ ಅಂಧಕಾರ

ಶಿಥಿಲಗೊಂಡ ಸರ್ಕಾರಿ ಶಾಲೆ ಕಟ್ಟಡ, ಜೀವಭಯದಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು

ಜಿ.ಬಿ.ನಾಗರಾಜ್
Published 6 ಜುಲೈ 2022, 4:31 IST
Last Updated 6 ಜುಲೈ 2022, 4:31 IST
ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಹಾಳಾಗಿರುವುದು.
ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಹಾಳಾಗಿರುವುದು.   

ಚಿತ್ರದುರ್ಗ: ಹೊರನೋಟಕ್ಕೆ ಅದೊಂದು ಸುಂದರ ಶಾಲೆ. ಆಳೆತ್ತರದ ಕಾಂಪೌಂಡ್‌ನಲ್ಲಿರುವ ಆಟದ ಮೈದಾನಕ್ಕೆ ನೆರಳಾಗಿರುವ ಮರ. ಮಕ್ಕಳನ್ನು ಆಕರ್ಷಿಸುವ ಶೈಕ್ಷಣಿಕ ವಾತಾವರಣ. ಆದರೆ, ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು ಮಾತ್ರ ಜೀವದ ಹಂಗು ತೊರೆಯಬೇಕು!

ಜೀವಭಯದಲ್ಲಿ ಪಾಠ ಕೇಳುವ ಸ್ಥಿತಿ ಇರುವುದು ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಚಾವಣಿಯ ಹೆಂಚುಗಳು ಹಾಳಾಗಿವೆ. ಸುರಿಯುವ ಮಳೆ, ಬೀಸುವ ಗಾಳಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುವ ಸ್ಥಿತಿ ಇಲ್ಲಿದೆ. ಬಂಗಾರದಂತಹ ಊರಿನ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ.

ತುರುವನೂರು ಹೋಬಳಿಯ ಈ ಗ್ರಾಮ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಈ ಹಳ್ಳಿಯ ಸರ್ಕಾರಿ ಶಾಲೆ ಆರಂಭವಾಗಿದೆ. ಗ್ರಾಮಸ್ಥರ ಪ್ರಕಾರ 1954ರಲ್ಲಿ ಚಿಕ್ಕಕಟ್ಟಡದಲ್ಲಿ ಆರಂಭವಾದ ಶಾಲೆ, ಕೆಲವೇ ವರ್ಷಗಳಲ್ಲಿ ಊರ ಹೊರಗೆ ಸ್ಥಳಾಂತರಗೊಂಡಿತು. ಆ ಸಮಯದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಮಕ್ಕಳು ಇಂದಿಗೂ ಪಾಠ ಕೇಳುವ ದುಃಸ್ಥಿತಿ ಇಲ್ಲಿದೆ.

ADVERTISEMENT

ಹೊಸಪೇಟೆ–ಚಿತ್ರದುರ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13ರಿಂದ ಎರಡು ಕಿ.ಮೀ ದೂರದಲ್ಲಿರುವ ಈ ಹಳ್ಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಭಯವಿಲ್ಲ. ಗ್ರಾಮದ ಹತ್ತು ವಿದ್ಯಾರ್ಥಿಗಳು ಮಾತ್ರ ಖಾಸಗಿ ಶಾಲೆಗೆ ತೆರಳುತ್ತಾರೆ. ಗ್ರಾಮದ ಬಹುತೇಕ ಮಕ್ಕಳಿಗೆ ಸರ್ಕಾರಿ ಶಾಲೆಯೇ ಆಸರೆ. ಒಂದರಿಂದ ಏಳನೇ ತರಗತಿಯವರೆಗಿನ ಈ ಶಾಲೆಯಲ್ಲಿ 106 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ.

ಶಾಲಾ ಕಟ್ಟಡದಲ್ಲಿ ಆರು ಕೊಠಡಿಗಳಿವೆ. ಒಂದನ್ನು ಶಿಕ್ಷಕರು ಹಾಗೂ ಕಚೇರಿಗೆ ಮೀಸಲಿಡಲಾಗಿದೆ. ಐದು ಕೊಠಡಿಯಲ್ಲಿ ಏಳು ತರಗತಿಯ ಮಕ್ಕಳು ಕುಳಿತುಕೊಳ್ಳಬೇಕಿದೆ. ನಲಿ–ಕಲಿ ಶಿಕ್ಷಣದ ಕಾರಣಕ್ಕೆ ಒಂದು, ಎರಡು ಮತ್ತು ಮೂರನೇ ತರಗತಿ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಳಿದ ನಾಲ್ಕು ಕೊಠಡಿಗಳಲ್ಲಿ 4, 5, 6 ಮತ್ತು 7ನೇ ತರಗತಿ ಮಕ್ಕಳು ಕುಳಿತುಕೊಳ್ಳುತ್ತಾರೆ.

ಶಿಥಿಲಾವಸ್ಥೆಯ ಕಟ್ಟಡದಲ್ಲಿ ನಾಲ್ಕು ಕೊಠಡಿಗಳಿವೆ. ಚಾವಣಿ ಸಂಪೂರ್ಣ ಹಾಳಾಗಿದ್ದು, ಹೆಂಚುಗಳು ಉದುರಿ ಬಿದ್ದಿವೆ. ಮರದ ಪಟ್ಟಿಗಳಿಗೆ ಗೆದ್ದಿಲು ಹಿಡಿದು ಮುರಿದು ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದಾಗ ಅಲ್ಲಲ್ಲಿ ಸೋರುತ್ತದೆ. ಗೋಣಿ ಚೀಲ ಹೊದ್ದು ಮಕ್ಕಳು ಕುಳಿತುಕೊಳ್ಳುವ ಅನಿವಾರ್ಯತೆ ಇಲ್ಲಿದೆ. ಶಿಕ್ಷಕರು ಪಾಠ ಮಾಡುವಾಗಲೇ ಚಾವಣಿಯಿಂದ ಹೆಂಚುಗಳು ಬಿದ್ದ ನಿದರ್ಶನಗಳು ಇವೆ.

ರಸ್ತೆಗಿಂತ ಶಾಲೆ ಕೆಳಭಾಗದಲ್ಲಿದೆ. ರಸ್ತೆಯಲ್ಲಿ ಬಿದ್ದ ಮಳೆನೀರು ಮೈದಾನಕ್ಕೆ ಬಂದು ನಿಲ್ಲುತ್ತದೆ. ಒಮ್ಮೆ ಮಳೆಬಂದರೆ ನಾಲ್ಕು ದಿನ ನೀರು ಹೊರಹೋಗುವುದಿಲ್ಲ. ಈ ಬಗ್ಗೆ ಶಾಲಾ ಶಿಕ್ಷಕರು, ಗ್ರಾಮಸ್ಥರು ತುರುವನೂರು ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಮಳೆ ನೀರು ಶಾಲಾ ಆವರಣದಲ್ಲಿ ನಿಲ್ಲುತ್ತಿದೆ.

ಹಾವು, ಚೇಳು ಆವಾಸಸ್ಥಾನ

ಶಿಥಿಲಗೊಂಡ ಶಾಲೆಯ ಕೊಠಡಿಗಳು ಹಾವು, ಚೇಳು ಸೇರಿದಂತೆ ವಿಷಜಂತುಗಳ ಆವಾಸ್ಥಾನಗಳಾಗಿವೆ. ಪ್ರತಿ ದಿನವೂ ಕೊಠಡಿಯಲ್ಲಿ ವಿಷಜಂತುಗಳಿಲ್ಲ ಎಂಬುದನ್ನು ಶಿಕ್ಷಕರು ಖಚಿತಪಡಿಸಿಕೊಂಡ ಬಳಿಕವಷ್ಟೇ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.

ಶಾಲೆಯು ಗ್ರಾಮದ ಹೊರಭಾಗದಲ್ಲಿದೆ. ಎರಡು ಕಡೆ ರಸ್ತೆ, ಮತ್ತೊಂದು ಕಡೆ ಜಮೀನಿದೆ. ಭಾನುವಾರದ ರಜೆ ಮುಗಿಸಿ ಸೋಮವಾರ ಬೆಳಿಗ್ಗೆ ಶಾಲೆಯ ಬಾಗಿಲು ತೆರೆದ ಸಂದರ್ಭದಲ್ಲಿ ಹಾವುಗಳು ಕೊಠಡಿಯಿಂದ ಹೊರಗೆ ಬಂದಿರುವ ನಿದರ್ಶನಗಳಿವೆ. ಕೊಠಡಿಯ ಗೋಡೆಗಳು ಅಲ್ಲಲ್ಲಿ ಬಿರುಕುಬಿಟ್ಟಿವೆ. ಈ ಸಂದುಗಳ ಮೂಲಕ ವಿಷಜಂತುಗಳು ಒಳಗೆ ಬರುತ್ತಿವೆ.

ಕಿರಿದಾದ ಅಡುಗೆ ಮನೆ

ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಲು ನಿರ್ಮಿಸಿದ ಅಡುಗೆ ಮನೆ ತೀರಾ ಕಿರಿದಾಗಿದೆ. ಮೂವರು ಅಡುಗೆ ಸಿಬ್ಬಂದಿ ಕುಳಿತುಕೊಳ್ಳಲು ಸಾಧ್ಯವಾಗದಂತಹ ಕೊಠಡಿ ಇದಾಗಿದೆ.

ಶಿಥಿಲಗೊಂಡ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ. ನೂರಕ್ಕೂ ಹೆಚ್ಚು ಮಕ್ಕಳಿಗೆ ಅಡುಗೆ ತಯಾರಿಸಲು ಮೂವರು ಸಿಬ್ಬಂದಿ ಇದ್ದಾರೆ. ಪಾತ್ರೆ, ನೀರು, ಸಾಮಗ್ರಿಗಳನ್ನು ಕೊಠಡಿಯಲ್ಲಿ ಇಟ್ಟುಕೊಂಡು ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ಈ ಕೊಠಡಿಯ ಬಾಗಿಲು ಅರ್ಧ ಮುರಿದು ಹೋಗಿದೆ.

ಕೋಟ್‌...

ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಯಾರೊಬ್ಬರೂ ಶಾಲೆಯ ಅಭಿವೃದ್ಧಿಗೆ ಕಾಳಜಿ ತೋರಿಲ್ಲ. ಗ್ರಾಮಸ್ಥರು ಅಸಹಾಯಕರಾಗಿದ್ದೇವೆ.

ಸತ್ಯಪ್ಪ, ಗ್ರಾಮಸ್ಥ ಬಂಗಾರಕ್ಕನಹಳ್ಳಿ

ಶಿಕ್ಷಣವೇ ನಮ್ಮ ಮೊದಲ ಆದ್ಯತೆ. ಶಾಲಾ ಕಟ್ಟಡ, ಮೂಲಸೌಲಭ್ಯಕ್ಕೆ ಒತ್ತು ನೀಡಲಾಗಿದೆ. ಶಾಲಾ ಕಟ್ಟಡದ ಮಾಹಿತಿ ಪಡೆಯುತ್ತೇನೆ. ಪುನರ್‌ ನಿರ್ಮಾಣ ಅಥವಾ ದುರಸ್ತಿ ಬಗ್ಗೆ ತೀರ್ಮಾನಿಸಲಾಗುವುದು.

ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.