ADVERTISEMENT

ಮಾವು: ಈ ಬಾರಿ ಬಂಪರ್‌ ಇಳುವರಿ ನಿರೀಕ್ಷೆ

ಚಳ್ಳಕೆರೆ: 260 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ... ಹೂವಿನಿಂದ ತೂಗಿನಿಂತಿವೆ ಮರದ ಕೊನೆಗಳು

ಶಿವಗಂಗಾ ಚಿತ್ತಯ್ಯ
Published 28 ಫೆಬ್ರುವರಿ 2023, 6:00 IST
Last Updated 28 ಫೆಬ್ರುವರಿ 2023, 6:00 IST
ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಆರ್.ಎ. ದಯಾನಂದ ಅವರ ತೋಟದಲ್ಲಿ ಹೂವಿನಿಂದ ತುಂಬಿರುವ ಮಾವಿನ ಮರ.
ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಆರ್.ಎ. ದಯಾನಂದ ಅವರ ತೋಟದಲ್ಲಿ ಹೂವಿನಿಂದ ತುಂಬಿರುವ ಮಾವಿನ ಮರ.   

ಚಳ್ಳಕೆರೆ: ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಹೆಚ್ಚು ಬೇಡಿಕೆ ಮತ್ತು ಉತ್ತಮ ಆದಾಯ ದೊರೆಯುವ ಕಾರಣ ತಾಲ್ಲೂಕಿನ ರೈತರು ಸಾವಯವ ಕೃಷಿ ವಿಧಾನವನ್ನು ಅನುಸರಿಸಿ ವಿವಿಧ ತಳಿಯ ಮಾವಿನ ಬೆಳೆಯನ್ನು ಬೆಳೆದಿದ್ದಾರೆ.

ದ್ಯಾವರನಹಳ್ಳಿ, ದೊಡ್ಡೇರಿ, ದೇವರಮರಿಕುಂಟೆ,, ಕೆಂಚಪ್ಪನಕಪಿಲೆ, ಮೀರಾಸಾಬಿಹಳ್ಳಿ, ಪುಟ್ಲರಹಳ್ಳಿ, ಬೇಡರೆಡ್ಡಿಹಳ್ಳಿ, ಬೆಳಗೆರೆ, ರಾಮಜೋಗಿಹಳ್ಳಿ, ಕುರುಡಿಹಳ್ಳಿ, ಕಮ್ಮತ್ ಮರಿಕುಂಟೆ, ಸಿದ್ದಾಪುರ, ಹೊಟ್ಟೆಪ್ಪನಹಳ್ಳಿ ಗ್ರಾಮಗಳು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 260 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗಿದ್ದು, ‌ಮರಗಳ ಕೊನೆಗಳು ಹೂವುಗಳಿಂದ ತೂಗಿ ನಿಂತಿವೆ. ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿ
ಇದ್ದಾರೆ.

ಈ ಭಾಗದಲ್ಲಿ ಉತ್ತಮ ಮಣ್ಣು ಹಾಗೂ ಉಷ್ಣಾಂಶವಿರುವ ಕಾರಣ ಕಡಿಮೆ ನೀರಿನಲ್ಲಿ ಮಾವು ಬೆಳೆಯಲು ಅವಕಾಶವಿದೆ.
ಮಾವಿನ ಬೆಳೆ ಈ ಬಾರಿ ಹೆಚ್ಚು ಹೂವು ಹಿಡಿದಿರುವ ಕಾರಣ ಬೆಳೆಗೆ ಜಿಗಿ ಹುಳುವಿನ ಕೀಟಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೆಳೆ ಬರಲು ಇನ್ನೂ 2 ತಿಂಗಳು ಬೇಕಾಗುತ್ತದೆ. ಕಾಯಿ ಈಚು ಕಟ್ಟುವ ಸಂದರ್ಭದಲ್ಲಿ ವೆಟೆಬಲ್ ಸಲ್ಫೂರಿಕ್ 100 ಗ್ರಾಂ, ಕಾನ್‍ಫಿಡರ್ ಅರ್ಧ ಎಂ.ಎಲ್. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪಡಣೆ ಮಾಡಬೇಕು. ಇದರಿಂದ ಕೀಟಬಾಧೆ ಹತೋಟಿಗೆ ಬರುತ್ತದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಸಲಹೆ ನೀಡಿದರು.

ADVERTISEMENT

ವಾರಕ್ಕೊಮ್ಮೆ ಮ್ಯಾಂಗೋ ಸ್ಪೆಷಲ್ ಲಘು ಪೋಷಕಾಂಶವನ್ನು 2 ಬಾರಿ ಬೆಳೆಗೆ ಸಿಂಪಡಣೆ ಮಾಡಿದರೆ ಕಾಯಿಯ ಗಾತ್ರ ದೊಡ್ಡದಾಗುವುದರ ಜತೆಗೆ ಆಕರ್ಷಕ ಬಣ್ಣ ಬರುತ್ತದೆ. ಇದರಿಂದ ಉತ್ತಮ ಇಳುವರಿಯೂ ಸಿಗುತ್ತದೆ ಎಂದೂ ಅವರು ತಿಳಿಸಿದರು.

ಜೇನು ಕೃಷಿಗೆ ಅನುದಾನ: ಮಾವಿನ ಮರಗಳು ಹೆಚ್ಚು ಹೂವು ಹಿಡಿದಿರುವುದರಿಂದ ಬೆಳೆಯ ಮಧ್ಯೆ ಜೇನು ಕೃಷಿ ಮಾಡಬಹುದು. ಹೂವು ಹೆಚ್ಚು ಇರುವುದು ಪರಾಗಸ್ಪರ್ಶ ಕ್ರಿಯೆಗೆ ಸಹಕಾರಿಯಾಗಿದೆ. ಪ್ರತಿ ಪೆಟ್ಟಿಗೆಗೆ ಇಲಾಖೆಯಿಂದ ಶೇ 50ರಷ್ಟು ಅನುದಾನ ನೀಡಲಾಗುವುದು. ಎಕರೆಗೆ 4-5 ಪೆಟ್ಟಿಗೆ ಇಟ್ಟು ಜೇನುಕೃಷಿಯಿಂದ ಉತ್ತಮ ಆದಾಯ ಪಡೆಯಬಹುದು ಎಂದು ಅವರು
ವಿವರಿಸಿದರು.

ಮಾವಿನಿಂದ ಉತ್ತಮ ಆದಾಯ

ಬೆಂಗಳೂರು, ಮಹಾರಾಷ್ಟ್ರ, ಶಿವಮೊಗ್ಗ, ತಮಿಳುನಾಡು, ಧಾರವಾಡದಿಂದ ಮಲ್ಲಿಕಾ, ಬಾದಾಮಿ, ರಸಪುರಿ, ಬೇನಿಷ, ಸಿಂಧೂರ ಹೀಗೆ 9 ತಳಿಯ ಮಾವಿನ 200 ಸಸಿಗಳನ್ನು ತಂದು 6 ಎಕರೆಯ ತೆಂಗು- ಅಡಿಕೆ ತೋಟದ ಮಧ್ಯೆ ಬೆಳೆಸಲಾಗಿದೆ. ಸಾವಯವ ಹಾಗೂ ಸಮಗ್ರ ಕೃಷಿ ವಿಧಾನ ಅನುಸರಿಸುತ್ತಿದ್ದು, ಆರಂಭದಲ್ಲಿ ₹ 80 ಸಾವಿರ ಆದಾಯ ಬಂದಿತ್ತು. ಈ ಬಾರಿ ಮರದ ತುಂಬೆಲ್ಲಾ ಹೂವು ಬಿಟ್ಟಿರುವುದರಿಂದ 8 ಟನ್ ಬೆಳೆಯಿಂದ ಕನಿಷ್ಠ ₹ 5 ಲಕ್ಷದಿಂದ ₹ 6 ಲಕ್ಷ ಆದಾಯ ನಿರೀಕ್ಷಿಸಿದ್ದೇವೆ ಎಂದು ಕೆಂಚಪ್ಪನಕಪಿಲೆ ಗ್ರಾಮದ ಪ್ರಗತಿಪರ ರೈತ ಆರ್.ಎ. ದಯಾನಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.