ADVERTISEMENT

ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸೀಟ್ ಪುಲ್: ಪ್ರವೇಶಾತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:02 IST
Last Updated 29 ಮೇ 2025, 15:02 IST
ಪಿಎಂಶ್ರೀ ಯೋಜನೆಯಡಿ ಚಳ್ಳಕೆರೆ ನಗರದ ಸರ್ಕಾರಿ ಮಾದರಿ ಬಾಲಕಿಯರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ನೆರೆದಿದ್ದ ಪಾಲಕರು
ಪಿಎಂಶ್ರೀ ಯೋಜನೆಯಡಿ ಚಳ್ಳಕೆರೆ ನಗರದ ಸರ್ಕಾರಿ ಮಾದರಿ ಬಾಲಕಿಯರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ನೆರೆದಿದ್ದ ಪಾಲಕರು   

ಪ್ರಜಾವಾಣಿ ವಾರ್ತೆ

ಚಳ್ಳಕೆರೆ: ಕೇಂದ್ರದ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವ ನಗರದ ಸರ್ಕಾರಿ ಮಾದರಿ ಬಾಲಕಿಯರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಎಲ್‍ಕೆಜಿಗೆ 30 ಮತ್ತು ಯುಕೆಜಿಗೆ 30 ಸೇರಿದಂತೆ ನಿಗದಿಪಡಿಸಿದ ಒಟ್ಟು 60 ಸೀಟುಗಳು ಸಂಪೂರ್ಣ ಭರ್ತಿಯಾಗಿದ್ದು, ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಪ್ರಸಕ್ತ ಸಾಲಿನಿಂದ ಆರಂಭವಾಗಿರುವ ಎಲ್‍ಕೆಜಿ-ಯುಕೆಜಿ ತರಗತಿಗಳಿಗೆ ತಲಾ 30 ಮಕ್ಕಳ ಪ್ರವೇಶಾತಿಗೆ ಅವಕಾಶ  ಕಲ್ಪಿಸಲಾಗಿದೆ. ಇವರಿಗೆ ಕಲಿಸಲು ನೇಮಕಗೊಳ್ಳುವ ಇಬ್ಬರು ಶಿಕ್ಷಕಿಯರಿಗೆ ಸರ್ಕಾರವೇ ವೇತನ ನೀಡಲಿದೆ. ಆದರೆ,
ಹೆಚ್ಚುವರಿ ಮಕ್ಕಳು ದಾಖಲಾದಲ್ಲಿ ಅವರಿಗೆ ಕಲಿಸಲು ನೇಮಕ ಮಾಡಿಕೊಳ್ಳುವ ಶಿಕ್ಷಕಿಗೆ ಸರ್ಕಾರ ವೇತನ ನೀಡುವುದಿಲ್ಲ. ಅದರ ಸಂಪೂರ್ಣ ನಿರ್ವಹಣೆ ಶಾಲಾಭಿವೃದ್ಧಿ ಸಮಿತಿ ವಹಿಸಿಕೊಳ್ಳಬೇಕು ಎಂಬ ಇಲಾಖೆ ನಿಯಮವಿದೆ.

ADVERTISEMENT

ನಿಗದಿಪಡಿಸಿದ ಸೀಟ್‍ಗಳಿಗೆ ಆನ್‍ಲೈನ್‍ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೆಚ್ಚುವರಿಯಾಗಿ ಅಪ್‍ಲೋಡ್ ಮಾಡಿದ ಅರ್ಜಿಗಳು ಸ್ವೀಕಾರವಾಗುವುದಿಲ್ಲ. ಆದಕಾರಣ ಹೆಚ್ಚುವರಿಯಾಗಿ ದಾಖಲಿಸಿಕೊಳ್ಳಲು ಅವಕಾಶವಿಲ್ಲ. ಆದರೂ ಮಕ್ಕಳನ್ನು ದಾಖಲಿಸಲು ಪಾಲಕರು ಪ್ರತಿದಿನ ಬಂದು ಹೋಗುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಹೇಮಂತರಾಜ ತಿಳಿಸಿದರು.

ತಾಲ್ಲೂಕಿನ ಗಡಿ ಗ್ರಾಮ ಕಾಮಸಮುದ್ರ ಮತ್ತು ನಗರಪ್ರದೇಶ ಸೇರಿ ಎರಡು ಕಡೆ ಪೂರ್ವ ಪ್ರಾಥಮಿ ಸರ್ಕಾರಿ ಶಾಲೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಅಗತ್ಯವಿರುವ ಕಡೆಗೆ ಎಲ್‍ಕೆಜಿ-ಯುಕೆಜಿ ತರಗತಿ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಈಗಿರುವ ಶಾಲೆಯಲ್ಲಿಯೇ ಹೆಚ್ಚುವರಿ ಸೀಟುಗಳನ್ನು ಬಡ ಮಕ್ಕಳಿಗೆ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತೇಶ್ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.