ADVERTISEMENT

ಕೋವಿಡ್‌ ಚಿಕಿತ್ಸೆಗೆ ತೊಡಕಾದ ಮುಷ್ಕರ

ಕೆಲಸದಿಂದ ಹೊರಗುಳಿದ ಎನ್ಎಚ್‌ಎಂ ಸಿಬ್ಬಂದಿ, ಮನವೊಲಿಕೆಗೆ ಅಧಿಕಾರಿಗಳ ಪ್ರಯತ್ನ

ಜಿ.ಬಿ.ನಾಗರಾಜ್
Published 4 ಅಕ್ಟೋಬರ್ 2020, 14:48 IST
Last Updated 4 ಅಕ್ಟೋಬರ್ 2020, 14:48 IST
ಡಾ.ಸಿ.ಎಲ್‌.ಫಾಲಾಕ್ಷ
ಡಾ.ಸಿ.ಎಲ್‌.ಫಾಲಾಕ್ಷ   

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ನೇಮಕಾತಿ ಹೊಂದಿದ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದು ಕೋವಿಡ್‌ ಚಿಕಿತ್ಸೆಗೆ ತೊಡಕಾಗಿ ಪರಿಣಮಿಸಿದೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಂತಾಗಿದೆ.

ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಜಿಲ್ಲೆಯ ಸುಮಾರು 543 ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಕೊರೊನಾ ಶಂಕಿತರ ಗಂಟಲು ದ್ರವದ ಮಾದರಿ ಸಂಗ್ರಹ, ಪ್ರಯೋಗಾಲಯದ ಕಾರ್ಯನಿರ್ವಹಣೆ, ಶುಶ್ರೂಷೆ, ಸ್ವಚ್ಛತೆ, ಮೇಲ್ವಿಚಾರಣೆ, ಲೆಕ್ಕಪತ್ರ ನಿರ್ವಹಣೆ ಹಾಗೂ ವರದಿ ಸಿದ್ದಪಡಿಸಲು ತೊಂದರೆಯುಂಟಾಗಿದೆ. ಮುಷ್ಕರ ನಿರತರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಗಿದೆ.

ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎನ್‌ಎಚ್‌ಎಂ ಸಿಬ್ಬಂದಿ ಸೆ.23ರಿಂದ ಮುಷ್ಕರ ನಡೆಸುತ್ತಿದ್ದಾರೆ. ಆರಂಭದ ಕೆಲ ದಿನ ಸಿಬ್ಬಂದಿಯಲ್ಲಿ ಅನೇಕರು ಕರ್ತವ್ಯಕ್ಕೂ ಹಾಜರಾಗಿದ್ದರು. ವಾರದಿಂದ ಈಚೆಗೆ ಬಹುತೇಕ ಎಲ್ಲರೂ ಕೆಲಸದಿಂದ ಹೊರಗೆ ಉಳಿದಿರುವುದು ಸಮಸ್ಯೆ ಸೃಷ್ಟಿಸಿದೆ. ಕೋವಿಡ್‌ ಜಿಲ್ಲಾ ಆಸ್ಪತ್ರೆ, ಕೋವಿಡ್ ಕೇರ್‌ ಕೇಂದ್ರಗಳಿಗೆ ಆರೋಗ್ಯ ಇಲಾಖೆ ಕಾಯಂ ಸಿಬ್ಬಂದಿಯನ್ನು ನಿಯೋಜಿಸಿದೆ. ಮುಷ್ಕರ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ADVERTISEMENT

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಿಯೋಜನೆಗೊಂಡವರಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಆಯುರ್ವೇದ ವೈದ್ಯರು ಅಭಿಯಾನದಡಿ ನೇಮಕಾತಿ ಹೊಂದಿದವರು. ಶುಶ್ರೂಷಕಿಯರು, ಲ್ಯಾಬ್‌ ಟೆಕ್ನಿಷಿಯನ್‌, ಲೆಕ್ಕಪತ್ರ ಸಹಾಯಕರು, ‘ಡಿ’ ಗ್ರೂಪ್‌ ನೌಕರರು, ಡಾಟಾ ಎಂಟ್ರಿ ಆಪರೇಟರ್‌, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮ ವ್ಯವಸ್ಥಾಪಕರು ಸೇರಿದಂತೆ ಹಲವು ಹಂತದ ಅಧಿಕಾರಿಗಳು ಸಹ ಕೆಲಸ ಸ್ಥಗಿತಗೊಳಿಸಿದ್ದಾರೆ.

ಇವರಲ್ಲಿ ಬಹುತೇಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಶಂಕಿತರ ಗಂಟಲು ದ್ರವದ ಮಾದರಿ ಸಂಗ್ರಹಿಸುವ ತಂಡದಲ್ಲಿಯೂ ಕೆಲಸ ಮಾಡುತ್ತಿದ್ದರು. ಕೋವಿಡ್‌ ಆಸ್ಪತ್ರೆ ಸೇರಿದಂತೆ ಕೇರ್‌ ಸೆಂಟರ್‌ಗಳಲ್ಲಿ ಶುಶ್ರೂಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ ಸೇವೆ ಒದಗಿಸುತ್ತಿದ್ದ ‘ಡಿ’ ದರ್ಜೆಯ ನೌಕರರು ಕೆಲಸ ಸ್ಥಗಿತಗೊಳಿಸಿದ್ದರಿಂದ ಸ್ವಚ್ಛತೆ ಕಾಪಾಡಲು ಹೆಣಗಾಡುವಂತಾಗಿದೆ.

‘ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದೇವೆ. ನಾಲ್ಕು ತಿಂಗಳ ಹಿಂದೆಯೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಸಮಿತಿ ನೇಮಕ ಮಾಡಿ ಕಾಲಾಹರಣ ಮಾಡಲಾಗುತ್ತಿದೆ. ಕೋವಿಡ್‌ ಕರ್ತವ್ಯ ನಿರ್ವಹಿಸಿದ ಕಾಯಂ ಸಿಬ್ಬಂದಿಗೆ ಸಿಗುವ ಸೌಲಭ್ಯ ನಮಗೂ ಸಿಗಬೇಕಲ್ಲವೇ’ ಎಂಬುದು ಎನ್‌ಎಚ್‌ಎಂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ್‌ ಅವರ ಪ್ರಶ್ನೆ.

‘ಮುಷ್ಕರ ನಿರತರ ಸಭೆ ನಡೆಸಿ ಮನವೊಲಿಕೆಗೆ ಪ್ರಯತ್ನಿಸಿದ್ದೇವೆ. ರಾಜ್ಯದೆಲ್ಲೆಡೆ ಮುಷ್ಕರಕ್ಕೆ ಕರೆನೀಡಿದ್ದರಿಂದ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಸಿಬ್ಬಂದಿ ಒಪ್ಪುತ್ತಿಲ್ಲ. ಆದರೆ, ಕೆಲವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.