ADVERTISEMENT

ಚಿತ್ರದುರ್ಗ: ಕಲ್ಪವೃಕ್ಷದಿಂದ ಅಂದಗೊಳ್ಳಲಿದೆ ನಿಜಲಿಂಗಪ್ಪ ಸ್ಮಾರಕ

100 ತೆಂಗಿನ ಸಸಿ ನೆಡುವ ಕಾರ್ಯಕ್ಕೆ ಮುರುಘಾ ಶರಣರ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 10:24 IST
Last Updated 1 ಜುಲೈ 2021, 10:24 IST
ಚಿತ್ರದುರ್ಗ ತಾಲ್ಲೂಕಿನ ಎಸ್‌.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಗುರುವಾರ ನೆಟ್ಟ ತೆಂಗಿನ ಸಸಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೀರೆರೆದರು. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ‘ಕುಡಾ’ ಅಧ್ಯಕ್ಷ ಟಿ.ಬದರೀನಾಥ್‌, ಸ್ಮಾರಕದ ಗೌರವ ಕಾರ್ಯದರ್ಶಿ ಎಚ್‌.ಹನುಮಂತಪ್ಪ, ಸಂಯೋಜಕ ಷಣ್ಮುಖಪ್ಪ ಇದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಎಸ್‌.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಗುರುವಾರ ನೆಟ್ಟ ತೆಂಗಿನ ಸಸಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೀರೆರೆದರು. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ‘ಕುಡಾ’ ಅಧ್ಯಕ್ಷ ಟಿ.ಬದರೀನಾಥ್‌, ಸ್ಮಾರಕದ ಗೌರವ ಕಾರ್ಯದರ್ಶಿ ಎಚ್‌.ಹನುಮಂತಪ್ಪ, ಸಂಯೋಜಕ ಷಣ್ಮುಖಪ್ಪ ಇದ್ದಾರೆ.   

ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಸಮೀಪದ ‍ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಷ್ಟ್ರನಾಯಕ ಎಸ್‌.ನಿಜಲಿಂಗಪ್ಪ ಅವರ ಸ್ಮಾರಕ ಇನ್ನಷ್ಟು ಅಂದಗೊಳ್ಳಲಿದೆ. ಸ್ಮಾರಕದ ಆವರಣದಲ್ಲಿ 100 ತೆಂಗಿನ ಸಸಿಗಳನ್ನು ನೆಡುವ ಕಾರ್ಯ ಗುರುವಾರ ನಡೆಯಿತು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹಾಗೂ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಸಾರಥ್ಯದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸ್ಮಾರಕದ ಸುತ್ತಲಿನ ಪ್ರದೇಶದಲ್ಲಿ ಕಲ್ಪವೃಕ್ಷ ಕಂಗೊಳಿಸಲಿವೆ. ತೋಟಗಾರಿಕೆ ಇಲಾಖೆ ತೆಂಗಿನ ಸಸಿಗಳನ್ನು ಒದಗಿಸಿದೆ.

‘ಪರಿಸರ ಮಾಲಿನ್ಯವನ್ನು ತಡೆಯಲು ಹಸಿರೀಕರಣ ಅಗತ್ಯವಾಗಿದೆ. ಮರಗಳನ್ನು ಕಡಿಯುವು ಹೆಚ್ಚುತ್ತಿದ್ದು, ನೆಡುವುದು ಕಡಿಮೆ ಆಗುತ್ತಿದೆ. ಮರ ಹನನದ ಪ್ರಮಾಣಕ್ಕೆ ಅನುಗುಣವಾಗಿ ಸಸಿ ನೆಡುವ ಕಾರ್ಯವೂ ಸಾಗಬೇಕು. ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ADVERTISEMENT

‘ಸ್ಮಾರಕದ ಆವರಣದಲ್ಲಿ ನೂರು ತೆಂಗಿನ ಸಸಿಗಳನ್ನು ನೆಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರ ಫಲ ನೆಟ್ಟವರಿಗೇ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಮುಂದಿನ ಪೀಳಿಗೆಗೆ ಇದರ ಫಲ ದೊರೆತರೆ ಶ್ರಮ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಜನಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಕಾಡು ವಿನಾಶದ ಅಂಚಿಗೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಡನ್ನು ಸಂರಕ್ಷಿಸಲು ಪ್ರಯತ್ನಿಸದೇ ಹೋದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರಲ್ಲಿ ಮರ–ಗಿಡ ಬೆಳೆಸುವ ಮನೋಭಾವ ಹೆಚ್ಚಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಆಮ್ಲಜನಕಕ್ಕೆ ಕೊರತೆ ಉಂಟಾಗಿರುವುದು ಕೋವಿಡ್‌ ಸಂದರ್ಭದಲ್ಲಿ ಮನವರಿಕೆ ಆಗಿದೆ. ಆಮ್ಲಜನಕಕ್ಕೆ ಪರದಾಟ ಉಂಟಾಗಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಆಮ್ಲಜನಕಕ್ಕೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಗಿಡ–ಮರಗಳ ಅಗತ್ಯವಿದೆ. ಕಾಡು ಕಡಿಮೆಯಾಗಿ ಜನಸಂಖ್ಯೆ ಹೆಚ್ಚಾದಂತೆ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಜೀವವಾಯುಗೆ ಕೊರತೆ ಉಂಟಾಗುತ್ತದೆ’ ಎಂದು ಹೇಳಿದರು.

‘ಇಂತಹ ಪರಿಸ್ಥಿತಿಯಲ್ಲಿ ಜನರು ಹೆಚ್ಚು ಜಾಗೃತಿ ವಹಿಸಬೇಕು. ಪ್ರತಿಯೊಬ್ಬರು ಸಾಮರ್ಥ್ಯಕ್ಕೆ ಅನುಗುಣವಾಗಿ ಗಿಡ ನೆಟ್ಟು ಪೋಷಣೆ ಮಾಡಬೇಕು. ಇದರಿಂದ ಮತ್ತೊಬ್ಬರಿಗೆ ಸ್ಫೂರ್ತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಸ್ಮಾರಕದ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಗಿದೆ. ಎಲ್ಲವನ್ನೂ ನೀಡುವ ಕಲ್ಪವೃಕ್ಷವನ್ನು ಬೆಳೆಸಿದರೆ ಮುಂದೆ ಈ ಮರ ಮಾನವನನ್ನು ಸಾಕುತ್ತದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಎಲ್ಲರೂ ಗಿಡ ಬೆಳೆಸಬೇಕು’ ಎಂದರು.

ಎಸ್‌.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ಗೌರವ ಕಾರ್ಯದರ್ಶಿ ಎಚ್‌.ಹನುಮಂತಪ್ಪ, ಸಂಯೋಜಕ ಕೆಇಬಿ ಷಣ್ಮುಖಪ್ಪ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಟಿ.ಬದರಿನಾಥ್‌, ಕಾಂಗ್ರೆಸ್‌ ಮುಖಂಡ ಜಿ.ಎಸ್‌.ಮಂಜುನಾಥ್‌, ಇತಿಹಾಸ ತಜ್ಞ ಡಾ.ಬಿ.ರಾಜಶೇಖರಪ್ಪ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ಇದ್ದರು.

***

ಪೊಲೀಸ್‌ ಮೈದಾನದಲ್ಲಿರುವ ತ್ರಿವರ್ಣ ಧ್ವಜದಂತೆ ನಿಜಲಿಂಗಪ್ಪ ಸ್ಮಾಕರದ ಆವರಣದಲ್ಲಿಯೂ ನಿರ್ಮಿಸಲು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಮುಂದಾಗಬೇಕು. ತ್ರಿವರ್ಣ ಧ್ವಜಕ್ಕೆ ಇದು ಸೂಕ್ತ ಸ್ಥಳ.
-ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.