ಚಿತ್ರದುರ್ಗ: ‘ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಜಾತಿಗಣತಿ ಪ್ರಕ್ರಿಯೆಯನ್ನು ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು. ಆದಷ್ಟು ಬೇಗ ವರದಿ ಸಿದ್ಧಗೊಳಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಶೀಘ್ರ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ಕಚೇರಿಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಒಳಮೀಸಲಾತಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಜಾತಿ ಗಣತಿ ಸಮಗ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಈಗಾಗಲೇ ಹಲವು ಬಾರಿ ಜಾತಿಗಣತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಎ.ಕೆ, ಎ.ಡಿ, ಆದಿಆಂಧ್ರ ಸಮಸ್ಯೆಗೆ ತೆರೆ ಎಳೆಯಲಾಗಿದೆ. ಅವರವರ ಸಂಖ್ಯೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗುರುತಿಸಲು ಪರಿಶಿಷ್ಟರಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಮೇ 5ರಿಂದ ಜಾತಿಗಣತಿ ಆರಂಭಗೊಂಡಿದೆ’ ಎಂದು ತಿಳಿಸಿದರು.
‘ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಆತಂಕ, ಗೊಂದಲ ಉಂಟಾಗಿತ್ತು. ಕಾಲಕ್ರಮೇಣ ಸುಗಮವಾಗಿ ನಡೆದಿದೆ. ಆದರೆ, ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲವೆಂಬ ಕಾರಣಕ್ಕೆ ಮೂರು ಬಾರಿ ಸಮೀಕ್ಷೆಯನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತಗೊಳಿಸಿ ಜುಲೈ 6ರವರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ಅಂತಿಮ ಅವಕಾಶ ಆಗಬೇಕು. ಯಾವುದೇ ಕಾರಣಕ್ಕೂ ಇನ್ನೊಮ್ಮೆ ವಿಸ್ತರಣೆ ಮಾಡಲೇಬಾರದು’ ಎಂದು ಆಗ್ರಹಿಸಿದರು.
‘ಈಗಾಗಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಬ್ಯಾಕ್‌ಲಾಗ್ ಸೇರಿ ಎಲ್ಲ ರೀತಿಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ತಡೆ ನೀಡಲಾಗಿದೆ. ಹಲವು ತಿಂಗಳುಗಳೇ ಆಗಿರುವುದರಿಂದ ಬಹಳಷ್ಟು ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆಗೆ ಒಳಮೀಸಲಾತಿ ಜಾರಿ ವಿಷಯದಲ್ಲಿ ಅನಗತ್ಯ ಗೊಂದಲ ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಏಕಸದಸ್ಯ ಆಯೋಗದ ಅಧ್ಯಕ್ಷರಾದ ತಾವು ಯಾವುದೇ ಕಾರಣಕ್ಕೂ ಸಮೀಕ್ಷೆಯನ್ನು ಜುಲೈ 6ರ ನಂತರ ವಿಸ್ತರಣೆ ಮಾಡಬಾರದು’ ಎಂದು ಕೋರಿದರು.
ಜುಲೈ 6 ಸಮೀಕ್ಷೆಗೆ ಅಂತಿಮ ದಿನ. ತಕ್ಷಣವೇ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಈ ತಿಂಗಳಾಂತ್ಯದಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ತಾವು ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ನೊಂದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು’ ಎಂದರು.
ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.