ಶ್ರೀರಾಂಪುರ: ಹೊಸದುರ್ಗ ತಾಲ್ಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿರುವ ಶ್ರೀರಾಂಪುರದಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲದಿರುವುದು ಕ್ರೀಡಾ ಪ್ರತಿಭೆಗಳ ಕನಸು ಕಮರುವಂತೆ ಮಾಡಿದೆ.
ಇಲ್ಲಿನ ಶಾಲೆ– ಕಾಲೇಜುಗಳಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯ ಅದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದು, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶಾಲವಾದ ಆಟದ ಮೈದಾನವಿದೆ. ಆದರೆ ವಾಲಿಬಾಲ್, ಬ್ಯಾಡ್ಮಿಂಟನ್, ಕೊಕ್ಕೊ, ಕಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ಅಥ್ಲೆಟಿಕ್ಸ್‌ನಂತಹ ಗುಂಪು ಆಟಗಳಿಗೆ ಪೂರಕವಾದ ಅಂಕಣಗಳಿಲ್ಲ. ಪ್ರತಿ ಶೈಕ್ಷಣಿಕ ವರ್ಷದ ಕ್ರೀಡಾ ಸ್ಪರ್ಧೆಗಳಿಗೆ ಶಿಕ್ಷಕರೇ ತಾತ್ಕಾಲಿಕವಾಗಿ ಅಂಕಣಗಳನ್ನು ಸಿದ್ಧಪಡಿಸಿಕೊಂಡು ಕ್ರೀಡಾಪಟುಗಳನ್ನು ಕ್ರೀಡೆಗೆ ಅಣಿಗೊಳಿಸುತ್ತಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಅಡಿ ಪ್ರೌಢಶಾಲಾ ಆವರಣದಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮಾಧ್ಯಮಿಕ ಶಾಲಾ ಆವರಣದಲ್ಲಿ ₹ 5 ಲಕ್ಷ ವೆಚ್ಚದ ಓಟದ ಟ್ರ್ಯಾಕ್ ನಿರ್ಮಾಣ ಮಾಡುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಪ್ರೌಢಶಾಲೆಯ ಆವರಣದ ಮಧ್ಯದಲ್ಲಿ ಕೊಠಡಿಗಳನ್ನು ನಿರ್ಮಿಸಿ ಮೈದಾನದ ಜಾಗೆ ಒತ್ತುವರಿ ಮಾಡಲಾಗಿದೆ. ಹೊಸದಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ.
ಆದರೆ, ಕಟ್ಟಡಗಳ ನಿರ್ಮಾಣ ಸಾಮಗ್ರಿಗಳಾದ ಜಲ್ಲಿಕಲ್ಲು, ಮರಳು ಮತ್ತಿತರ ವಸ್ತುಗಳನ್ನು ಮೈದಾನದಲ್ಲಿ ಹಾಕಿರುವುದರಿಂದ ಮೈದಾನದ ವಿವಿಧೆಡೆ ಗುಂಡಿಗಳು ಬಿದ್ದಿವೆ. ಪಾರ್ಥೇನಿಯಂ ಹಾಗೂ ಮುಳ್ಳಿನ ಗಿಡಗಳು ಬೆಳೆದಿವೆ.
ಇಲ್ಲಿನ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಎಲ್ಲಾ ವಿಭಾಗಗಳು ಒಂದೇ ಕ್ಯಾಂಪಸ್‌ನಲ್ಲಿದ್ದು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರುವ ಮೂಲಕ ಪ್ರೌಢಶಾಲೆ ಹಾಗೂ ಮಾಧ್ಯಮಿಕ ಶಾಲೆಗಳ ಮಧ್ಯೆ ಇರುವ ಕಾಂಪೌಂಡ್ ಹಾಗೂ ಶಿಥಿಲಗೊಂಡಿರುವ ಕೊಠಡಿಗಳನ್ನು ತೆರವುಗೊಳಿಸಿ ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಸುಸಜ್ಜಿತ ಅಂಕಣಗಳನ್ನು ನಿರ್ಮಿಸಬೇಕಿದೆ. ಇದರಿಂದ ಕ್ರೀಡಾಪಟುಗಳಿಗೆ ನಿತ್ಯ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಪ್ಪ.
(ಇಂದಿಗೆ ಈ ಸರಣಿಯು ಕೊನೆಗೊಂಡಿತು)
*
ಹೋಬಳಿ ಕೇಂದ್ರದಲ್ಲಿ ಸುಸಜ್ಜಿತವಾದ ಆಟದ ಮೈದಾನದ ಕೊರತೆ ಇದೆ. ಈಗಿರುವ ಹದಗೆಟ್ಟ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕಿದೆ.
-ಜಿ. ಜಯಪ್ಪ, ದೈಹಿಕ ಶಿಕ್ಷಣ ಶಿಕ್ಷಕ
*
ಶೈಕ್ಷಣಿಕ ವರ್ಷದ ಕ್ರೀಡೆಗಳಲ್ಲಿ ಅಭ್ಯಾಸಕ್ಕಾಗಿ ತಾತ್ಕಾಲಿಕವಾಗಿ ಮರದ ಪೋಲ್ಸ್‌ಗಳನ್ನು ನೆಟ್ಟು ಅಭ್ಯಾಸ ಮಾಡಿಸಲಾಗುತ್ತಿದೆ. ಆದರೆ, ಕೆಲವು ಕಿಡಿಗೇಡಿಗಳು ಪೋಲ್ಸ್‌ಗಳನ್ನೇ ಕಿತ್ತುಕೊಂಡು ಹೋಗುತ್ತಾರೆ. ಈ ಕುರಿತು ಎಚ್ಚರಿಕೆ ನೀಡಬೇಕು.
-ಸುಜಾತಾ, ದೈಹಿಕ ಶಿಕ್ಷಣ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.