ADVERTISEMENT

ಶಾಂತಿಯ ನೆಲೆಗೆ ಅಹಿಂಸೆಯೇ ಮಾರ್ಗ: ತರಳಬಾಳು ಶ್ರೀಗಳ ಸಂದೇಶ

ಧಾರ್ಮಿಕ ಮುಖಂಡರ ಆನ್‌ಲೈನ್ ಸಂವಾದದಲ್ಲಿ ತರಳಬಾಳು ಶ್ರೀಗಳ ಸಂದೇಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 2:40 IST
Last Updated 5 ಅಕ್ಟೋಬರ್ 2020, 2:40 IST
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ಸಿರಿಗೆರೆ: ಎಲ್ಲಿ ಶಾಂತಿ ನೆಲೆಸಿರುತ್ತದೆಯೋ ಅಲ್ಲಿ ಅಹಿಂಸೆ ಇರುತ್ತದೆ. ಎಲ್ಲಿ ಹಿಂಸೆ ಇರುತ್ತದೆಯೋ ಅಲ್ಲಿ ಶಾಂತಿಯ ಅಗತ್ಯತೆ ಇರುತ್ತದೆ ಎಂದು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ವಶಾಂತಿ ಸಂದೇಶ ಸಾರಿದರು.

‘ಹಿಂಸಾಚಾರಕ್ಕೆ ಶಾಂತಿಯೇ ಮದ್ದು’ ಎಂಬ ವಿಷಯದ ಕುರಿತು ಭಾನುವಾರ ನಡೆದ ಧಾರ್ಮಿಕ ಮುಖಂಡರ ಆನ್‌ಲೈನ್ ಸಂವಾದದಲ್ಲಿ ಅವರು ಮಾತನಾಡಿದರು.

‘ಶಾಂತಿ ನೆಲೆಸಿರುವಲ್ಲಿ ಅಹಿಂಸೆ ಸ್ವಾಭಾವಿಕವಾಗಿ ಇರುತ್ತದೆ. ಅಲ್ಲಿ ಹಿಂಸೆಗೆ ಅವಕಾಶವೇ ಇರುವುದಿಲ್ಲ. ಶಾಂತಿಯಿಂದ ಅಹಿಂಸೆಯೋ, ಅಹಿಂಸೆಯಿಂದ ಶಾಂತಿಯೋ ಎಂಬುದು ನಮ್ಮ ಮೂಲ ಪ್ರಶ್ನೆಯಾಗಿದೆ. ಶಾಂತಿ, ಅಹಿಂಸೆಗಳಲ್ಲಿ ಗುರಿ ಯಾವುದು ಮತ್ತು ಅದನ್ನು ಸಾಧಿಸಲು ಇರುವ ಹಾದಿ ಯಾವುದು ಎಂಬುದನ್ನು ಯೋಚಿಸಬೇಕು. ಶಾಂತಿ ಎಂಬುದು ನಾವು ತಲುಪಬೇಕಾದ ಗುರಿ. ಅದನ್ನು ತಲುಪಲು ಅನುಸರಿಸಬೇಕಾದ ದಾರಿಯೇ ಅಹಿಂಸೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಅಹಿಂಸಾ ಮಾರ್ಗದಲ್ಲಿ ನಡೆದು ಶಾಂತಿಯನ್ನು ಸ್ಥಾಪಿಸಬೇಕಾಗುವುದು ಇಂದಿನ ಅಗತ್ಯ. ಶಾಂತಿಯ ಕಾರಣದಿಂದ ಅಹಿಂಸೆಯು ಕೊನೆಗೊಳ್ಳುವುದಿಲ್ಲ. ಬದಲಾಗಿ ಅಹಿಂಸೆಯೇ ಶಾಂತಿಯ ಗಂಗೋತ್ರಿ’ ಎಂದು ಹೇಳಿದರು.

‘ಶಾಂತಿ ಎಂಬುದು ಮನಸ್ಸಿನ ಸ್ಥಿತಿ. ಅಹಿಂಸೆಯಿಂದ ಸಾಧಿತವಾಗುವ ಶಾಂತಿ ಎಲ್ಲರಿಗೂ ಬೇಕಾಗಿದೆ. ಆದರೆ, ಜಗತ್ತಿನ ಜನರ ಮಧ್ಯೆ, ದೇಶಗಳ ಮಧ್ಯೆ ದ್ವೇಷವಿದೆ. ಇಂತಹ ವಿಷಮ ಸಂದರ್ಭದಲ್ಲಿ ಶಾಂತಿಯ ಅಗತ್ಯ ತುಂಬಾ ಇದೆ. ಅದು ಇಂದಿನ ಅಗತ್ಯವಷ್ಟೇ ಅಲ್ಲ; ಮುಂದೆಯೂ ಅದು ಮಾನವ ಕಲ್ಯಾಣಕ್ಕಾಗಿ ಬೇಕಾಗಿದೆ.ಶಾಂತಿಯು ಒಬ್ಬರಲ್ಲಿ ಇದ್ದರೆ ಮಾತ್ರ ಸಾಲದು. ಸಮಕಾಲೀನ ತಲ್ಲಣದ ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೇ ಅದು ಬೇಕಾಗಿದೆ’ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.