ADVERTISEMENT

ಮತದಾರರ ವಿವರ ನೀಡಲು ಕವಿತಾ ಎಸ್‌. ಮನ್ನಿಕೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 8:03 IST
Last Updated 11 ನವೆಂಬರ್ 2021, 8:03 IST

ಚಿತ್ರದುರ್ಗ: ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನದ ಹಕ್ಕು ಪಡೆಯಲಿದ್ದಾರೆ. ಅರ್ಹ ಮತದಾರರ ವಿವರವನ್ನು ಶೀಘ್ರ ಒದಗಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಚುನಾಯಿತ ಸದಸ್ಯರು ಮತ ಚಲಾಯಿಸಲಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಮಾಹಿತಿ ಒದಗಿಸಬೇಕು’ ಎಂದು ತಾಕೀತು ಮಾಡಿದರು.

‘ಮತದಾನ ಕೇಂದ್ರಗಳ ಸ್ಥಾಪನೆ, ಮತಗಟ್ಟೆ ಸಿಬ್ಬಂದಿ ನೇಮಕಾತಿ, ತರಬೇತಿ, ಮತಗಟ್ಟೆ ಸಾಮಗ್ರಿಗಳ ಸಂಗ್ರಹ, ಮತಪೆಟ್ಟಿಗೆಗಳ ಸಿದ್ಧತೆಯನ್ನು ಕೈಗೊಳ್ಳಬೇಕು. ಮಾದರಿ ನೀತಿ ಸಂಹಿತೆ ನ.9ರಿಂದ ಜಾರಿಯಾಗಿದ್ದು, ಡಿ.16ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ’ ಎಂದು ಹೇಳಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಚುನಾವಣಾ ತಹಶೀಲ್ದಾರ್ ಸಿ.ಜೆ.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.