ADVERTISEMENT

ಪೈಪ್‍ಲೈನ್ ಕಾಮಗಾರಿಗೆ ಅಡ್ಡಿ ಭೂ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:59 IST
Last Updated 25 ನವೆಂಬರ್ 2021, 2:59 IST
ಚಳ್ಳಕೆರೆ ಸೂಜಿನಗರದ ಬಳಿ ರಾಜಕಾಲುವೆ ಜಾಗವನ್ನು ತಹಶೀಲ್ದಾರ್ ಎನ್. ರಘುಮೂರ್ತಿ ಪರಿಶೀಲನೆ ನಡೆಸಿದರು
ಚಳ್ಳಕೆರೆ ಸೂಜಿನಗರದ ಬಳಿ ರಾಜಕಾಲುವೆ ಜಾಗವನ್ನು ತಹಶೀಲ್ದಾರ್ ಎನ್. ರಘುಮೂರ್ತಿ ಪರಿಶೀಲನೆ ನಡೆಸಿದರು   

ಸೂಜಿಮಲ್ಲೇಶ್ವರ ನಗರ (ಚಳ್ಳಕೆರೆ): ನಗರದ ಬಳ್ಳಾರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸೂಜಿಮಲ್ಲೇಶ್ವರನಗರದ ಬಳಿ ಕೊಳಚೆ ನೀರಿನ ಪೈಪ್‍ಲೈನ್ ಕಾಮಗಾರಿಗೆ ಅಡ್ಡಿಪಡಿಸಿದ ಭೂ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕರ ಸ್ವಾಸ್ಥ್ಯ ಹಾಗೂ ನಗರ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಕೆಲಸ. ಭೂಮಿ ಅಳತೆಯ ಸರ್ವೆ ದಾಖಲೆಯಲ್ಲಿ ರಾಜಕಾಲುವೆ ಗುರುತು ಅಳಿಸಿ ಹೋಗಿರುವ ಕಾರಣ ಜಾಗವನ್ನು ಒತ್ತುವರಿ ಮಾಡಿಕೊಂಡ ಮಾಲೀಕರು, ರಾಜಕಾಲುವೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ.ಮಲಿನಗೊಂಡು ರಸ್ತೆ ಬದಿಯಲ್ಲಿ ಸಂಗ್ರಹಗೊಂಡಿದ್ದು, ಹಂದಿ ಹಾಗೂ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಸೂಜಿಮಲ್ಲೇಶ್ವರನಗರ, ಕಾಟಪ್ಪನಹಟ್ಟಿ, ಚಿತ್ರಯ್ಯನಹಟ್ಟಿ ಹಾಗೂ ಹಳೆಟೌನ್‍ನಲ್ಲಿ ವಿಷಮಶೀತ ಜ್ವರ ಹಾಗೂ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ’ ಎಂದು ಹೇಳಿದರು.

ಪೌರಾಯುಕ್ತ ಪಾಲಯ್ಯ ಮಾತನಾಡಿ, ‘ನಗರಸಭೆ ಸಿಬ್ಬಂದಿ ಎರಡು–ಮೂರು ಬಾರಿ ಪೈಪ್‍ಲೈನ್ ಕಾಮಗಾರಿ ಆರಂಭಿಸಿದ್ದರು. ಭೂ ಮಾಲೀಕರು ತಡೆದಿದ್ದಾರೆ. ಹಾಗಾಗಿ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದರು.

ADVERTISEMENT

ತ್ಯಾಗರಾಜನಗರ, ವಾಲ್ಮೀಕಿನಗರ, ಶಾಂತಿನಗರ, ರಹೀಂ ನಗರ ಹಾಗೂ ಚಿತ್ರಯ್ಯನಹಟ್ಟಿ ಸೇರಿ ವಿವಿಧ ವಾರ್ಡ್‌ಗಳ ಕೊಳಚೆ ನೀರು ಹರಿದುಹೋಗಲು ಕಾಲುವೆ ಇಲ್ಲದಿರುವುದರಿಂದ ಬಳ್ಳಾರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಂಡಿಯಲ್ಲಿ ಸಂಗ್ರಹಗೊಂಡಿದೆ. ಹಾಗಾಗಿ ಕೊಳಚೆನೀರು ಮುಂದಕ್ಕೆ ಹರಿದುಹೋಗಲು ಕಾಲುವೆ ನಿರ್ಮಾಣ ಮಾಡಿಸಬೇಕು ಎಂದು ಜನರು ಮನವಿ ಮಾಡಿದರು.

ನಗರಸಭೆ ಎಂಜಿನಿಯರ್ ಲೋಕೇಶ್, ಕಂದಾಯ ಅಧಿಕಾರಿ ವೀರಮ್ಮ, ನಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.