ADVERTISEMENT

ಮಲ್ಲಿಕಾರ್ಜುನ ಶ್ರೀಗಳ ಸೇವಾ ಕಾರ್ಯ ಸ್ಮರಣೀಯ

ಒಂಟಿಕಂಬದ ಮಠದಲ್ಲಿ 31ನೇ ಸ್ಮರಣೋತ್ಸವ; ಶಿವಯೋಗಿ ಸಿ. ಕಳಸದ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:25 IST
Last Updated 9 ಆಗಸ್ಟ್ 2025, 4:25 IST
ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಶುಕ್ರವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ‘ಚಿನ್ಮೂಲಾದ್ರಿ ಚಿತ್ಕಳೆ’ ಸ್ಮರಣ ಸಂಚಿಕೆಯ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಲಾಯಿತು
ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಶುಕ್ರವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ‘ಚಿನ್ಮೂಲಾದ್ರಿ ಚಿತ್ಕಳೆ’ ಸ್ಮರಣ ಸಂಚಿಕೆಯ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಲಾಯಿತು   

ಹೊಳಲ್ಕೆರೆ: ‘ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸಮಾಜ ಸೇವಾ ಕಾರ್ಯಗಳು ಸ್ಮರಣೀಯ. ಸಮಾಜದಲ್ಲಿ ಬಹುಕಾಲ ಉಳಿಯುವ ಕೆಲಸಗಳನ್ನು ಶ್ರೀಗಳು ಮಾಡಿದ್ದಾರೆ’ ಎಂದು ಮುರುಘಾ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹೇಳಿದರು.

ಪಟ್ಟಣದ ಒಂಟಿಕಂಬದ ಮಠದಲ್ಲಿ ಶುಕ್ರವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ 31ನೇ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮಲ್ಲಿಕಾರ್ಜುನ ಸ್ವಾಮೀಜಿ 30 ವರ್ಷಗಳ ಸುದೀರ್ಘ ಕಾಲ ಮುರುಘಾ ಮಠದ ಪೀಠಾಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಸಮಾಜ ಕಟ್ಟುವ ಕಾರ್ಯ ಮಾಡಿದ್ದಾರೆ. ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತರ ಹಸಿವು ನೀಗಿಸಿದ್ದಾರೆ. ಶ್ರೀಗಳು ಹಲವು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅವರು ಆರಂಭಿಸಿದ ಶಾಲಾ, ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಜೀವನ ರೂಪಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.

ADVERTISEMENT

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಮರುಘಾ ಮಠದ ಎತ್ತರಕ್ಕೆ ಬೆಳೆಯಲು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಕೊಡುಗೆ ದೊಡ್ಡದಿದೆ. ಶ್ರೀಗಳು ಭೂಮಿ, ಸೂರ್ಯ, ಚಂದ್ರ ಇರುವರೆಗೂ ಅವರ ಹೆಸರು ಅಜರಾಮರವಾಗಿ ಉಳಿಯುಂತಹ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಹೋಗಿದ್ದಾರೆ. ಭೀಷ್ಮ ಯಾವ ರೀತಿ ಇಚ್ಛಾ ಮರಣಿಯೋ ಹಾಗೆಯೇ ಮಲ್ಲಿಕಾರ್ಜುನ ಶ್ರೀಗಳು ಕೂಡಾ ಅವರು ತೀರ್ಮಾನಿಸಿದ ದಿನವೇ ಇಹಲೋಕ ತೇಜಿಸಿದರು. ಮುರುಘಾ ಮಠವು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದವರಿಗೂ ಸಹಕಾರಿಯಾಗಿದೆ’ ಎಂದರು.

‘ಮಲ್ಲಿಕಾರ್ಜುನ ಸ್ವಾಮೀಜಿ ಶಿಕ್ಷಣ ಸೂರ್ಯ ಆಗಿದ್ದರು. 1967ರಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಅವರನ್ನು ಮಧ್ಯ ಕರ್ನಾಟಕದ ಶಿಕ್ಷಣ ಕ್ಷೇತ್ರದ ಹರಿಕಾರ ಎಂದರೆ ತಪ್ಪಾಗಲಾರದು. ಶ್ರೀಗಳು ಸಮಾಧಿಯಾಗಲು ಹೊಳಲ್ಕೆರೆಯನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮ ಈ ತಾಲ್ಲೂಕಿನ ಜನರ ಪುಣ್ಯ’ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

‘ಮಲ್ಲಿಕಾರ್ಜುನ ಸ್ವಾಮೀಜಿ ಅವರ ಜೀವನ ಶೈಲಿ ಜನಮಾನ್ಯರಲ್ಲಿ ಆಳವಾಗಿ ಬೇರೂರಿದೆ. ಶ್ರೀಗಳು ಬಡವರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಶಿಕ್ಷಣ ನೀಡಲು ಶ್ರಮಿಸಿದರು. ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ, ಓದಲು ಅನುಕೂಲ ಮಾಡಿಕೊಟ್ಟರು’ ಎಂದು ಮಾಜಿ ಶಾಸಕ ಪಿ.ರಮೇಶ್‌ ಸ್ಮರಿಸಿದರು.

‘1970-80ರ ದಶಕದಲ್ಲಿ ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿಯಿತ್ತು. ಅದನ್ನು ಮನಗಂಡು ಮಲ್ಲಿಕಾರ್ಜುನ ಶ್ರೀಗಳು ನಾಡಿನ ವಿವಿಧೆಡೆ ಹಾಸ್ಟೆಲ್‌ಗಳು, ಶಾಲಾ ಕಾಲೇಜು ಆರಂಭಿಸಿದರು. ಅವರ ಪರಿಶ್ರಮದಿಂದ ಎಸ್ ಜೆಎಂ ವಿದ್ಯಾಪೀಠ ಸ್ಥಾಪನೆಯಾಯಿತು’ ಎಂದು ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು.

‘ಮಲ್ಲಿಕಾರ್ಜುನ ಸ್ವಾಮೀಜಿಯ ಮಾತುಗಳು ಮುತ್ತಿನಂತೆ ಇರುತ್ತಿದ್ದವು. ಅವರು ಕೊಟ್ಟ ಮಾತು ತಪ್ಪದವರು. ಅವರಿಗೆ ಬಸವಣ್ಣನ ಬಗ್ಗೆ ಅಪಾರವಾದ ಭಕ್ತಿ ಇತ್ತು’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನುಡಿದರು.

ಮಠದ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಸ್ವಾಮೀಜಿ, ಪಿ.ಎಸ್.ಶಂಕರ್, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೊಡ್ಲಿಪೇಟೆಯ ರುದ್ರಮುನಿ ಸ್ವಾಮೀಜಿ, ಗುರುಮಠಕಲ್‌ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ಉಳವಿಯ ಬಸವಲಿಂಗ ಮೂರ್ತಿ ಸ್ವಾಮೀಜಿ, ಬೀದರಿನ ಶರಣೆ ಸತ್ಯಕ್ಕ, ಬೈರಮಂಗಲ ರಾಮೇಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಹಾಲಿಂಗ ಸ್ವಾಮೀಜಿ, ಬಸವ ಭಂಗೇಶ್ವರ ಸ್ವಾಮೀಜಿ, ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಮರುಳ ಶಂಕರ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ ಇದ್ದರು.

ಸ್ಮರಣೋತ್ಸವದಲ್ಲಿ ನಡೆದ ಬಸವತತ್ವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿದ್ದರು

‘ಚಿನ್ಮೂಲಾದ್ರಿ ಚಿತ್ಕಳೆ’ ಗ್ರಂಥ ಬಿಡುಗಡೆ

ಹಿರಿಯ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ ಪ್ರಧಾನ ಸಂಪಾದಕತ್ವ ಹಾಗೂ ಕೆ.ಎಲ್.ರಾಜಶೇಖರ್ ಸಂಪಾದಕತ್ವದಲ್ಲಿ ಹೊರತಂದಿರುವ ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥದ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.   ‘ಮೊದಲನೇ ಆವೃತ್ತಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 2 ಸಾವಿರ ಪ್ರತಿಗಳು ಖಾಲಿಯಾದವು. ಈಗ ಮಲ್ಲಿಕಾರ್ಜುನ ಸ್ವಾಮೀಜಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪರಿಷ್ಕೃತ ಆವೃತ್ತಿ ರಚಿಸಲಾಗಿದೆ. ಈ ಗ್ರಂಥದಲ್ಲಿ ಶ್ರೀಗಳ ಕುರಿತು ಸಮಗ್ರ ಮಾಹಿತಿ ಇದ್ದು ಗ್ರಂಥ ಹೊರತರಲು ಆಡಳಿತ ಮಂಡಳಿಯವರು ಹೆಚ್ಚು ಸಹಕಾರ ನೀಡಿದ್ದಾರೆ. ಮುಂದಿನ ವರ್ಷದ ಸ್ಮರಣೋತ್ಸವದಲ್ಲಿ ಇನ್ನೊಂದು ಪುಸ್ತಕ ಬಿಡುಗಡೆ ಮಾಡಲಾಗುವುದು’ ಎಂದು ಲಕ್ಷ್ಮಣ ತೆಲಗಾವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.