ADVERTISEMENT

ಕೇದಾರ ಗೌರಿ ಪೂಜೆಗೆ ತೆರೆ: ಮೆರವಣಿಗೆ ಮೂಲಕ ಗೌರಿ ದೇವಿಯ ಕಳಸದ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 4:57 IST
Last Updated 8 ನವೆಂಬರ್ 2021, 4:57 IST
ಭರಮಸಾಗರದಲ್ಲಿ ಕೇದಾರ ಗೌರಿ ಪೂಜೆ ಅಂಗವಾಗಿ ತುರುವನೂರು ವಂಶಸ್ಥರ ಮನೆಯೊಂದರಲ್ಲಿ ಕೇದಾರ ಗೌರಿ ದೇವಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು
ಭರಮಸಾಗರದಲ್ಲಿ ಕೇದಾರ ಗೌರಿ ಪೂಜೆ ಅಂಗವಾಗಿ ತುರುವನೂರು ವಂಶಸ್ಥರ ಮನೆಯೊಂದರಲ್ಲಿ ಕೇದಾರ ಗೌರಿ ದೇವಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು   

ಭರಮಸಾಗರ: ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಆಚರಿಸಲ್ಪಟ್ಟ ಕೇದಾರ ಗೌರಿ ಪೂಜೆ ಭಾನುವಾರ ದೊಡ್ಡಕೆರೆಯಲ್ಲಿ ವಿಸರ್ಜನೆಯೊಂದಿಗೆ ತೆರೆಕಂಡಿತು.

ಕರಿನಾಗಶೆಟ್ರು, ಕಾಡೇಹಳ್ಳಿ, ಮರಿಬೆಶೆಟ್ರು, ಬಸೆಟ್ರು, ತುರುವನೂರು, ದಾವಣಗೆರೆ ವೀರಣ್ಣ, ಹುಬ್ಬಳಿ ವಂಶದ ಕುಟುಂಬ ಹಾಗೂ ಬಣಜಿಗ ವೀರಶೈವ ಶೆಟ್ರು ಮನೆಗಳಲ್ಲಿ ಹಾಗೂ ಇತರರ ಮನೆಗಳಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಗೌರಿದೇವಿಯನ್ನು ಪ್ರತಿಷ್ಠಾಪಿಸುವ ಮನೆಗಳಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮನೆಯ ಮುಂದೆ ರಂಗು ರಂಗಿನ ರಂಗೋಲಿ ಹಾಕಿದ್ದರು. ಗುರುವಾರ ಸಂಜೆ ದೊಡ್ಡಕೆರೆಯಲ್ಲಿ ಗಂಗಾಪೂಜೆಯೊಂದಿಗೆ ಕಳಸದಲ್ಲಿ ತಂದ ಕೇದಾರ ಗೌರಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ADVERTISEMENT

ಶುಕ್ರವಾರ ಹಿರಿಯರ ನೆನಪಿನಲ್ಲಿ ಹೊಸಬಟ್ಟೆ ಸಮರ್ಪಿಸಲಾಯಿತು. ನಂತರದಲ್ಲಿ ಲಕ್ಷ್ಮೀಪೂಜೆ ಮಾಡಲಾಯಿತು. ಶನಿವಾರ ದೀಪಾವಳಿ ಆಚರಣೆ ಮುಗಿದ ನಂತರ ಭಾನುವಾರ ಬೆಳಿಗ್ಗೆ ಕೇದಾರ ಗೌರಿ ಪ್ರತಿಷ್ಠಾಪಿಸಿದ್ದ ಮನೆಯವರು ಬೃಹತ್ ಮೆರವಣಿಗೆಯಲ್ಲಿ ಸಾಗಿ ದೊಡ್ಡಕೆರೆಯಲ್ಲಿ ಬರುತ್ತಿರುವ ತುಂಗಭದ್ರಾ ನೀರಿನಲ್ಲಿ ಗೌರಿ ದೇವಿಯ ಕಳಸವನ್ನು ವಿಸರ್ಜಿಸಿದರು.

ಕಳೆದ ವರ್ಷ ಕೊರೊನಾ ಪ್ರಯುಕ್ತ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ದೊಡ್ಡಕೆರೆಗೆ ನೀರು ಬರುತ್ತಿರುವ ಸಂಭ್ರಮದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರಿದ್ದರು. ಕಳಸ ಹಿಡಿದ ಮಹಿಳೆಯರು ದೊಡ್ಡಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯ ಮುಂದೆ ಪಟಾಕಿಗಳನ್ನು ಸಿಡಿಸಲಾಯಿತು. ಕರಿಗಲ್ಲಿನ ಬಳಿ ಆರತಿ ಎತ್ತಿ ದೊಡ್ಡಕೆರೆಗೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜನರು ದೊಡ್ಡಕೆರೆಯಲ್ಲಿ ನೀರು ಬರುತ್ತಿರುವುದನ್ನು ಕಣ್ತುಂಬಿಕೊಂಡರು. ಮೆರವಣಿಗೆಗೆ ವಾದ್ಯ ಮೇಳೆ ಮೆರುಗು ನೀಡಿತು.‌ದೊಡ್ಡಪೇಟೆ ಶಿವಯೋಗಿ ಮಂದಿರದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಕೇದಾರ ಪೂಜೆ ಹಿನ್ನೆಲೆ: ಭೃಂಗ ಮಹರ್ಷಿ, ಶಿವನಿಗೆ ಮಾತ್ರ ನಮಸ್ಕರಿಸಿ ಪಕ್ಕದಲ್ಲಿಯೇ ಇದ್ದ ಪಾರ್ವತಿಗೆ ನಮಸ್ಕರಿದೇ ಇದ್ದಾಗ ಸಿಟ್ಟಿಗೆದ್ದ ಪಾರ್ವತಿ ಶಿವನ ಪೂರ್ಣ ಪ್ರೀತಿ ತನಗೇ ಸಿಗಬೇಕು ಎಂದು ಗೌತಮ ಋಷಿ ಅವರನ್ನು ಕೇಳಿ ಈ ಪೂಜೆ ಮಾಡುತ್ತಾಳೆ.

ಇಪ್ಪತ್ತೊಂದು ಎಳೆ, ಇಪ್ಪತ್ತೊಂದು ಗ್ರಂಥಿ ಇರುವಂತಹ ದಾರವನ್ನು ಕೈಗೆ ಕಟ್ಟಿಕೊಂಡು ಇಪ್ಪತ್ತೊಂದು ಎಳೆಯ ದಾರವನ್ನು ಕಳಸಕ್ಕೆ ಸುತ್ತಿ ವಸ್ತ್ರವನ್ನು ಹೊದಿಸಿ ಅಲಂಕಾರ ಮಾಡಿ ಶಿವನನ್ನು ಆಹ್ವಾನಿಸಿ ಪೂಜೆ ಮಾಡುವುದು ರೂಢಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.