ADVERTISEMENT

ವಾಣಿಜ್ಯ ವಹಿವಾಟಿಗೆ ಸಿಗದ ಅವಕಾಶ

ಕೋವಿಡ್‌ ಆಸ್ಪತ್ರೆ ಸುತ್ತಲಿನ ಪ್ರದೇಶ ಸೀಲ್‌ಡೌನ್‌

ಜಿ.ಬಿ.ನಾಗರಾಜ್
Published 28 ಮೇ 2020, 13:29 IST
Last Updated 28 ಮೇ 2020, 13:29 IST
ಚಿತ್ರದುರ್ಗ ಜೋಗಿಮಟ್ಟಿ ರಸ್ತೆ ಸೀಲ್‌ಡೌನ್‌ ಆಗಿರುವುದು
ಚಿತ್ರದುರ್ಗ ಜೋಗಿಮಟ್ಟಿ ರಸ್ತೆ ಸೀಲ್‌ಡೌನ್‌ ಆಗಿರುವುದು   

ಚಿತ್ರದುರ್ಗ: ‘ಸೈಕಲ್‌ ರಿಪೇರಿ ಮಾಡಿದ ಹಣದಲ್ಲಿ ಬದುಕಿನ ಬಂಡಿ ಸಾಗುತ್ತಿತ್ತು. 45 ವರ್ಷಗಳಿಂದ ಒಂದು ದಿನವೂ ತೊಂದರೆ ಆಗಿರಲಿಲ್ಲ. ಲಾಕ್‌ಡೌನ್‌ ಘೋಷಣೆಯಾದಾಗ ಸಮಸ್ಯೆ ಶುರುವಾಯಿತು. ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ಸುತ್ತ ಸೀಲ್‌ಡೌನ್‌ ಮಾಡಿದ ಬಳಿಕ ಬದುಕಿನ ಭರವಸೆ ಕಮರಿ ಹೋಗಿದೆ. ಜೀವನ ಸಾಗಿಸುವುದು ಕಷ್ಟವಾಗಿದೆ...’

ಬಾಗಿಲು ಮುಚ್ಚಿದ ಸೈಕಲ್‌ ಶಾಪ್‌ ಎದುರು ಕುಳಿತು ನೀರವಮೌನವನ್ನು ದಿಟ್ಟಿಸುತ್ತಿದ್ದ ನಿಂಗಪ್ಪ ಕಣ್ಣಂಚಲ್ಲಿ ನೀರು ಇಣುಕುತ್ತಿತ್ತು. ಲಾಕ್‌ಡೌನ್‌ ಸಡಿಲಗೊಂಡರೂ ಕೋವಿಡ್‌ ಆಸ್ಪತ್ರೆ ಬಳಿ ಅಂಗಡಿ ಬಾಗಿಲು ತೆರೆಯಲು ಅವಕಾಶ ಸಿಕ್ಕಿಲ್ಲ. ನಿಂಗಣ್ಣ ಅವರಂತೆ ಹಲವು ವ್ಯಾಪಾಸ್ಥರು ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ.

‘ಅಪ್ಪ ಸೈಕಲ್‌ ರಿಪೇರಿ ಮಾಡುತ್ತಿದ್ದರು. ಚಿಕ್ಕಂದಿನಲ್ಲೇ ಈ ವಿದ್ಯೆ ಕರಗತವಾಯಿತು. ಆರು ಜನ ಸಹೋದರರು ಇದೇ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್ ಸಡಿಲಗೊಂಡ ಬಳಿಕ ಎಲ್ಲ ವಹಿವಾಟಿಗೂ ಅವಕಾಶ ಸಿಕ್ಕಿದೆ. ಆದರೆ, ಆಸ್ಪತ್ರೆಯ ಸಮೀಪ ಇರುವ ನಮ್ಮ ಅಂಗಡಿ ಬಾಗಿಲು ತೆರೆಯಲು ಈವರೆಗೆ ಸಾಧ್ಯವಾಗಿಲ್ಲ. ಇನ್ನೂ ಎಷ್ಟು ದಿನ ಹೀಗೆ ದಿನ ದೂಡಬೇಕು ಎಂಬುದು ಗೊತ್ತಾಗುತ್ತಿಲ್ಲ...’ ಎಂದಾಗ ಮನಸಿನಲ್ಲಿದ್ದ ದುಗುಡ ಢಾಳಾಗಿ ಗೋಚರಿಸುತ್ತಿತ್ತು.

ADVERTISEMENT

ಕೊರೊನಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ತೆರೆಯಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಗುವಿಗೆ ಪ್ರತ್ಯೇಕವಾಗಿ ನಿರ್ಮಿಸುತ್ತಿದ್ದ ಕಟ್ಟಡವನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ನೂತನ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಮೇ 7ರಿಂದ ಕೊರೊನಾ ಸೋಂಕಿತರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆ ಸುತ್ತಲಿನ 200 ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಭರಮಪ್ಪನಾಯಕ ವೃತ್ತ, ಜೋಗಿಮಟ್ಟಿ ಮುಖ್ಯರಸ್ತೆ, ರಂಗಯ್ಯನಬಾಗಿಲು ರಸ್ತೆ, ಮದಕರಿನಾಯಕ ವೃತ್ತ ಸಂಪೂರ್ಣ ಸೀಲ್‌ಡೌನ್‌ ಆಗಿವೆ. ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೋಗಿಮಟ್ಟಿ ರಸ್ತೆ 1ನೇ ಕ್ರಾಸ್‌, ರಂಗಯ್ಯನಬಾಗಿಲು, ಮದಕರಿನಾಯಕ ವೃತ್ತ, ಜಿಲ್ಲಾ ಆಸ್ಪತ್ರೆಯ ಬಳಿ ಬ್ಯಾರಿಕೇಡ್‌ಗಳನ್ನು ಇಟ್ಟು ರಸ್ತೆ ಬಂದ್‌ ಮಾಡಲಾಗಿದೆ. ಮಾದಪ್ಪ ಕಾಂಪೌಂಡ್ ನಿವಾಸಿಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಾಲಕಿಯರ ಪಿಯು ಕಾಲೇಜು ಪಕ್ಕದ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಸಂಚರಿಸುವ ಪ್ರತಿಯೊಬ್ಬರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ.

ಸೀಲ್‌ಡೌನ್‌ ಮಾಡಿದ ಪ್ರದೇಶದಲ್ಲಿ 8ಕ್ಕೂ ಅಧಿಕ ಔಷಧದಂಗಡಿಗಳಿವೆ. ಲಾಕ್‌ಡೌನ್‌ ಆರಂಭದಲ್ಲಿ ತೆರೆದಿದ್ದ ಔಷಧದಂಗಡಿಗಳು ತಿಂಗಳಿಂದ ಬಾಗಿಲು ಮುಚ್ಚಿವೆ. ಕೋವಿಡ್‌ ಚಿಕಿತ್ಸೆಗೆ ಔಷಧ ಪೂರೈಸುವ ಏಜೆನ್ಸಿ ಮಾತ್ರ ಸೇವೆ ಒದಗಿಸುತ್ತಿದೆ. ಪಂಕ್ಚರ್‌ ಶಾಪ್‌, ಹೋಟೆಲ್‌, ಬೇಕರಿ, ಫೋಟೊ ಸ್ಟೂಡಿಯೊ, ಆಫ್ಟಿಕಲ್ಸ್‌, ಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಬಾಗಿಲು ಮುಚ್ಚಿವೆ. ವ್ಯಾಪಾರ ವಹಿವಾಟು ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಅಪಾಯಕಾರಿ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸೀಲ್‌ಡೌನ್‌ ಅಗತ್ಯವೆಂದು ಜಿಲ್ಲಾಡಳಿತ ಸಮರ್ಥನೆ ನೀಡುತ್ತಿದೆ. ಆಸ್ಪತ್ರೆ ಆವರಣ ಹೊರತುಪಡಿಸಿ ಉಳಿದೆಡೆ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ಕಲ್ಪಿಸುವಂತೆ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ನೆಲೆಸಿರುವವರು ಹಲವು ರೀತಿಯ ಆತಂಕಗಳನ್ನು ಎದುರಿಸುತ್ತಿದ್ದಾರೆ. ‘ಕೋವಿಡ್‌–19 ಆಸ್ಪತ್ರೆ’ಯನ್ನು ನಗರದ ಹೊರಭಾಗಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.