ADVERTISEMENT

ಒಂದು ವಾರ ಭಾಗಶಃ ಅನ್‌ಲಾಕ್

ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ಅವಕಾಶ l ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೂ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 3:45 IST
Last Updated 14 ಜೂನ್ 2021, 3:45 IST
ಜಿ. ರಾಧಿಕಾ
ಜಿ. ರಾಧಿಕಾ   

ಚಿತ್ರದುರ್ಗ: ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು, ಹೊಸ ಆದೇಶ ಜಿಲ್ಲಾ ವ್ಯಾಪ್ತಿಗೆ ಒಂದು ವಾರಕ್ಕೆ ನಿಗದಿಯಾಗಿದೆ. ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶವಿದೆ. ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ.

‘ಅಗತ್ಯ ವಸ್ತುಗಳಾದ ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನಗಳು, ಹಾಲಿನ ಕೇಂದ್ರಗಳು, ಪ್ರಾಣಿ ಆಹಾರ, ತಳ್ಳುವ ಗಾಡಿ, ಬೀದಿ ಬದಿ ವ್ಯಾಪಾರ, ಪಡಿತರ ಅಂಗಡಿಗಳನ್ನು ನಿಗದಿತ ಅವಧಿಯಲ್ಲಿ ತೆರೆಯಬಹುದು. ಕನ್ನಡಕದ ಅಂಗಡಿಗಳಿಗೂ ಇದೇ ನಿಯಮ ಅನ್ವಯವಾಗಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸ್ಪಷ್ಟಪಡಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲ ಬಗೆಯ ಕೈಗಾರಿಕೆಗಳನ್ನು ನಿಗದಿಪಡಿಸಿದ ಸಮಯದಲ್ಲಿ ತೆರೆಯಬಹುದು. ಆದರೆ, ಶೇ 50ರಷ್ಟು ಕಾರ್ಮಿಕರು ಕರ್ತವ್ಯ ನಿರ್ವಹಿಸಬಹುದು. ಗಾರ್ಮೆಂಟ್ಸ್‌ ಕೈಗಾರಿಕೆಗಳಲ್ಲಿ ಶೇ 30ರಷ್ಟು ನೌಕರರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ADVERTISEMENT

ಹೋಟೆಲ್‌, ಬಾರ್ ಅಂಡ್‌ ರೆಸ್ಟೋರಂಟ್‌, ಮದ್ಯ ಮಳಿಗೆಗಳಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಪಾರ್ಸೆಲ್‌ಗೆ ಅವಕಾಶವಿದೆ. ಇ–ಕಾಮರ್ಸ್‌, ದಿನಸಿ ಸೇರಿ ಎಲ್ಲ ಬಗೆಯ ವಸ್ತುಗಳನ್ನು ಮನೆಗಳಿಗೆ ಪೂರೈಕೆ ಮಾಡಲು 24X7 ಅವಕಾಶ ಕಲ್ಪಿಸಲಾಗಿದೆ. ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಟೊ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು. ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಚಟುವಟಿಕೆ ಸಂಬಂಧ ಸಿಮೆಂಟ್, ಕಬ್ಬಿಣದ ಅಂಗಡಿ ಮಧ್ಯಾಹ್ನ 2ರವರೆಗೂ ತೆರೆಯಬಹುದು. ಕೃಷಿ ಇಲಾಖೆ ಮತ್ತು ಸಂಬಂಧಿಸಿದ ಕಚೇರಿ, ಲೋಕೋಪಯೋಗಿ, ವಸತಿ, ಸಹಕಾರ, ಕಂದಾಯ ಇಲಾಖೆ, ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಶೇ 50ರಷ್ಟು ನೌಕರರು ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದರು.

ಅವಕಾಶ ಕಲ್ಪಿಸಲಾದ ಅಂಗಡಿಗಳು ಮಧ್ಯಾಹ್ನ 2ರ ಒಳಗೆ ಬಾಗಿಲು ಮುಚ್ಚಬೇಕು. ಆ ನಂತರ ತುರ್ತು ಸೇವೆ, ಸರಕು ಸಾಗಣೆ ವಾಹನ ಹೊರತುಪಡಿಸಿ ಅನಗತ್ಯವಾಗಿ ಯಾರೂ ರಸ್ತೆಗೆ ಇಳಿಯುವಂತಿಲ್ಲ. ವಸ್ತುಗಳ ಖರೀದಿ ವೇಳೆ ಎಲ್ಲಿಯೂ ಗುಂಪು ಸೇರುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ಸೇವೆ ಸಂಬಂಧ ಸಂಚಾರಕ್ಕೆ ಅಡ್ಡಿ ಇಲ್ಲ. ಔಷಧ ಮಳಿಗೆಗಳು 24 ಗಂಟೆ ತೆರೆಯಬಹುದು. ಕೋವಿಡ್, ತುರ್ತು ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೂ ನಿರ್ಬಂಧವಿಲ್ಲ. ಉದ್ಯಾನಗಳಲ್ಲಿ ಬೆಳಿಗ್ಗೆ 5ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.