ADVERTISEMENT

ಲಾಭಕ್ಕಿಂತ ಪ್ರಯಾಣಿಕರ ಸುರಕ್ಷತೆ ಮುಖ್ಯ: ಶಿವಯೋಗಿ ಕಳಸದ

ಬಸ್‌ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಶಿವಯೋಗಿ ಕಳಸದ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 3:19 IST
Last Updated 6 ನವೆಂಬರ್ 2020, 3:19 IST
ಹೊಳಲ್ಕೆರೆಯಲ್ಲಿ ನಿರ್ಮಿಸುತ್ತಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಎಂಡಿ ಶಿವಯೋಗಿ ಸಿ.ಕಳಸದ ಗುರುವಾರ ವೀಕ್ಷಿಸಿದರು
ಹೊಳಲ್ಕೆರೆಯಲ್ಲಿ ನಿರ್ಮಿಸುತ್ತಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಎಂಡಿ ಶಿವಯೋಗಿ ಸಿ.ಕಳಸದ ಗುರುವಾರ ವೀಕ್ಷಿಸಿದರು   

ಹೊಳಲ್ಕೆರೆ: ‘ನಮಗೆ ಲಾಭಕ್ಕಿಂತ ಪ್ರಯಾಣಿಕರ ಸುರಕ್ಷತೆ ಮುಖ್ಯ’ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹೇಳಿದರು.

ಪಟ್ಟಣದಲ್ಲಿ ನಿರ್ಮಿಸುತ್ತಿರುವ ಕೆಎಸ್ಆರ್‌ಟಿಸಿ ನೂತನ ಬಸ್ ನಿಲ್ದಾಣ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.

‘ಕೋವಿಡ್ ಕಾರಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಹಿಂದೆ ನಿತ್ಯ 30 ಲಕ್ಷ ಪ್ರಯಾಣಿಕರು ನಮ್ಮ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಕೋವಿಡ್ ನಂತರ ಈ ಸಂಖ್ಯೆ 10 ಲಕ್ಷಕ್ಕೆ ಇಳಿದಿದೆ. ಈಗ ಸ್ವಲ್ಪ ಚೇತರಿಕೆ ಕಾಣಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ 12 ಲಕ್ಷಕ್ಕೆ ಏರಿಕೆಯಾಗಿದೆ. ಮುಂದೆ ಇನ್ನೂ ಸುಧಾರಿಸುವ ವಿಶ್ವಾಸ ಇದೆ. ನಿಗಮವು ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಹೊಸ ನೇಮಕಾತಿಗಳನ್ನು ನಿಲ್ಲಿಸಲಾಗಿದೆ. ಇನ್ನು ಆರೇಳು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸ ಇದ್ದು, ನಂತರ ನೇಮಕಾತಿ ಆರಂಭಿಸಲಾಗುವುದು. ಸಂಸ್ಥೆ ನಷ್ಟದಲ್ಲಿದ್ದರೂ ನೌಕರರಿಗೆ ವೇತನ ನೀಡಲಾಗಿದೆ. ಮತ್ತೆ ಮೂರು ತಿಂಗಳ ವೇತನ ಬಿಡುಗಡೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ADVERTISEMENT

ಕೆಎಸ್‌ಆರ್‌ಟಿಸಿ ಮುಖ್ಯ ಎಂಜಿನಿಯರ್ ಜಗದೀಶ್ ಚಂದ್ರ ಮಾತನಾಡಿ, ‘ಪಟ್ಟಣದಲ್ಲಿ ನಿರ್ಮಿಸುತ್ತಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ನ.6ಕ್ಕೆ ನಿಲ್ದಾಣ ಉದ್ಘಾಟನೆ ಆಗಬೇಕಿತ್ತು. ನೀತಿ ಸಂಹಿತೆ ಇರುವುದರಿಂದ ತಡವಾಗಿದೆ. ನ. 20ರಂದು ಉದ್ಘಾಟನೆ ಮಾಡಲಾಗುವುದು. ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಮಳೆನೀರು ಸಂಗ್ರಹ ಸೇರಿದಂತೆ ಪರಿಸರ ಸ್ನೇಹಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ನಿತ್ಯ 240 ಬಸ್‌ಗಳು ಈ ನಿಲ್ದಾಣ ಸಂಪರ್ಕಿಸುತ್ತವೆ’ ಎಂದು ಹೇಳಿದರು.

ಕೆಎಸ್ಆರ್‌ಟಿಸಿ ಡಿಸಿ ವಿಜಯ ಕುಮಾರ್, ಡಿಟಿಒ ಚನ್ನಬಸಪ್ಪ, ಎಂಜಿನಿ ಯರ್ ನಾಗರಾಜ್, ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.