ADVERTISEMENT

ಹಿರಿಯೂರು: ರಸ್ತೆ ವಿಸ್ತರಣೆ ನೆಪದಲ್ಲಿ ಬರೀ ತೇಪೆ...!

ಐಬಿ ವೃತ್ತದಿಂದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವರೆಗಿನ ರಸ್ತೆ ವಿಸ್ತರಣೆಯಲ್ಲಿ ಗೊಂದಲ

ಸುವರ್ಣಾ ಬಸವರಾಜ್
Published 17 ಮಾರ್ಚ್ 2025, 7:19 IST
Last Updated 17 ಮಾರ್ಚ್ 2025, 7:19 IST
ಹಿರಿಯೂರಿನ ಮಹಾತ್ಮಗಾಂಧಿ ವೃತ್ತದ ಸಮೀಪ ಕಟ್ಟಡದ ಮುಂಭಾಗದ ಭಾಗವನ್ನು ನಗರಸಭೆ ಆಡಳಿತ ತೆರವುಗೊಳಿಸಿರುವುದು 
ಹಿರಿಯೂರಿನ ಮಹಾತ್ಮಗಾಂಧಿ ವೃತ್ತದ ಸಮೀಪ ಕಟ್ಟಡದ ಮುಂಭಾಗದ ಭಾಗವನ್ನು ನಗರಸಭೆ ಆಡಳಿತ ತೆರವುಗೊಳಿಸಿರುವುದು    

ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದಿಂದ ಹುಳಿಯಾರು ರಸ್ತೆಯಲ್ಲಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವರೆಗಿನ ರಸ್ತೆ ವಿಸ್ತರಣೆ ಈಗ ಗೊಂದಲದ ಗೂಡಾಗಿದೆ. ಲಭ್ಯವಿರುವ ಅನುದಾನ ಬಳಸದಿದ್ದರೆ ಹಣ ಸರ್ಕಾರಕ್ಕೆ ಮರಳಿ ಹೋಗುತ್ತದೆ ಎನ್ನುವ ಕಾರಣಕ್ಕೆ ರಸ್ತೆಗೆ ತೇಪೆ ಹಾಕುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ವಾಣಿವಿಲಾಸ ಬಲನಾಲೆಯಿಂದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವರೆಗೆ, ವೇದಾವತಿ ಸೇತುವೆಯಿಂದ ಪ್ರವಾಸಿ ಮಂದಿರ ವೃತ್ತದವರೆಗೆ ಪ್ರಧಾನ ರಸ್ತೆಯನ್ನು ವಿಸ್ತರಿಸುತ್ತಿರುವ ರೀತಿಯಲ್ಲಿಯೇ ವೇದಾವತಿ ಸೇತುವೆಯಿಂದ ವಾಣಿವಿಲಾಸ ಬಲನಾಲೆಯವರೆಗೂ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿತ್ತು. ಅದಕ್ಕಾಗಿ ವಿವಿಧ ಸಂಘಟನೆಗಳು ದಶಕದಿಂದಲೂ ಹೋರಾಟ ಮಾಡಿದ್ದರು.

ರಸ್ತೆ ಮಧ್ಯಭಾಗದಿಂದ 70 ಅಡಿಗೆ ನಿಗದಿಪಡಿಸಿದ್ದ ನಗರಸಭೆ ಅದೇ ಮಾನದಂಡವನ್ನು ವೇದಾವತಿ ಸೇತುವೆಯಿಂದ ವಾಣಿವಿಲಾಸ ನಾಲೆಯವರೆಗೆ ಅಳವಡಿಸಿಕೊಂಡಿಲ್ಲ. ಬದಲಾಗಿ ರಸ್ತೆ ಬದಿಯ ಕೇವಲ ಅಂಗಡಿಮುಂಗಟ್ಟುಗಳ ಮುಂಭಾಗದ ಮೆಟ್ಟಿಲು, ಚರಂಡಿ ತೆರವುಗೊಳಿಸಿ ರಸ್ತೆಗೆ ಡಾಂಬರ್‌ ಹಾಕುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ಪ್ರಧಾನ ರಸ್ತೆ ವಿಸ್ತರಣೆ ಕುರಿತು ಜನ ಅಂದುಕೊಂಡಿದ್ದೇ ಒಂದು, ನಗರಸಭೆ ಮಾಡುತ್ತಿರುವುದೇ ಮತ್ತೊಂದು ಎಂಬ ರೀತಿಯಲ್ಲಿ ರಸ್ತೆ ವಿಸ್ತರಣೆ ಎಂಬ ಪ್ರಹಸನ ನಡೆಯುತ್ತಿದೆ. ಯಾವ ಜಾಗದಲ್ಲಿ ಸಂಚಾರ ವ್ಯತ್ಯಯವಾಗಿ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೋ ಅಲ್ಲಿ ನಿಯಮಾನುಸಾರ ರಸ್ತೆ ವಿಸ್ತರಣೆ ಮಾಡದಿರುವುದು ಜನರಿಗೆ ಬೇಸರ ತರಿಸಿದೆ. ಒಮ್ಮೆಗೆ ಎರಡು ವಾಹನಗಳು ಸಂಚರಿಸುವಷ್ಟು ಮಾತ್ರ ಅಗಲವಿರುವ ರಸ್ತೆಯಲ್ಲಿ ನಿತ್ಯ ನೂರಾರು ಬಾರಿ ಟ್ರಾಫಿಕ್ ಜಾಮ್‌ ಆಗುವುದನ್ನು ತಪ್ಪಿಸಲು ಷಟ್ಪಥ ರಸ್ತೆಯನ್ನಾಗಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. 

ಸತ್ಯನಾರಾಯಣಸ್ವಾಮಿ ದೇವಸ್ಥಾನ, ಅದರ ಎದುರು ಭಾಗದಲ್ಲಿದ್ದ ಜಾಮೀಯ ಮಸೀದಿ ಜಾಗವನ್ನು ತೆರವುಗೊಳಿಸಲು ತೋರಿಸಿದ ಆಸಕ್ತಿಯನ್ನು ಓಣಿಯಂತಹ ರಸ್ತೆಯಲ್ಲಿನ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ತೋರಿಸದಿರುವುದು ಸಂಶಯಕ್ಕೆ ಎಡೆಮಾಡಿದೆ. 2018 ಮಾರ್ಚ್ 26 ರಂದು ಆಗ ಶಾಸಕರಾಗಿದ್ದ ಡಿ. ಸುಧಾಕರ್ ಅವರು ನಗರಸಭೆಯ ನಗರೋತ್ಥಾನ ಯೋಜನೆಯಡಿ ₹ 36.61 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ನಂತರ 5 ವರ್ಷ ಕೆ.ಪೂರ್ಣಿಮಾ ಶಾಸಕಿಯಾಗಿದ್ದ ಅವಧಿಯಲ್ಲಿ ವೇದಾವತಿ ಕಾಲೇಜಿನಿಂದ ತುಳಸಿ ಕಲ್ಯಾಣ ಮಂಟಪದವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಯಿತು. ಸುಧಾಕರ್ ಅವರು ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ಬೇಡಿಕೆಯಂತೆ ರಸ್ತೆ ಅತ್ಯಂತ ಕಿರಿದಾಗಿರುವ ವೇದಾವತಿ ಸೇತುವೆಯಿಂದ ವಾಣಿವಿಲಾಸ ಬಲನಾಲೆಯವರೆಗಿನ ರಸ್ತೆಯನ್ನು ನಿಯಮಾನುಸಾರ ವಿಸ್ತರಣೆ ಮಾಡಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ರಸ್ತೆ ವಿಸ್ತರಣೆ ಕೈಬಿಟ್ಟಿಲ್ಲ:

‘ರಸ್ತೆ ವಿಸ್ತರಣೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಮಾರ್ಚ್ ಅಂತ್ಯದ ಒಳಗೆ ನಗರೋತ್ಥಾನ ಯೋಜನೆಯ ಹಣವನ್ನು ಬಳಸಿಕೊಳ್ಳದೇ ಹೋದರೆ ಸರ್ಕಾರಕ್ಕೆ ಮರಳಿ ಹೋಗುತ್ತದೆ. ಹೀಗಾಗಿ ಅಂಗಡಿಮುಂಗಟ್ಟುಗಳ ಮುಂದಿನ ಮೆಟ್ಟಿಲುಗಳನ್ನು ತೆರವುಗೊಳಿಸಿ ಸಾಧ್ಯವಾದಷ್ಟೂ ಹೆಚ್ಚಿನ ಜಾಗಕ್ಕೆ ಡಾಂಬರು ಹಾಕಲಾಗುತ್ತಿದೆ. ನ್ಯಾಯಾಲಯದ ತೀರ್ಪು ಬಂದಾಕ್ಷಣ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಾಗುತ್ತೇವೆ. ಊಹಾಪೋಹದ ಮಾತುಗಳಿಗೆ ಉತ್ತರ ಹೇಳಲು ಆಗದು. ರಸ್ತೆ ವಿಸ್ತರಣೆ ಆಗಿಯೇ ಆಗುತ್ತದೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಜೆ.ಆರ್. ಅಜಯ್ ಕುಮಾರ್.

‘ಪ್ರಧಾನ ರಸ್ತೆಗೆ ಪರ್ಯಾಯ ರಸ್ತೆಯೇ ಇಲ್ಲದ ಕಾರಣ ರಸ್ತೆ ವಿಸ್ತರಣೆ ಆಗಲೇಬೇಕು. ರಾಜಕೀಯ ಕೆಸರೆರಚಾಟ ಬಿಟ್ಟು ಸ್ಥಳೀಯರು ಹಾಗೂ ಹೊರಗಿನಿಂದ ಬಂದುಹೋಗುವ ಪ್ರಯಾಣಿಕರ ಹಿತ ನೋಡಬೇಕು’ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.