ADVERTISEMENT

ಸೇವಾ ಕ್ಷೇತ್ರಗಳಿಗೆ ಏ.20ರಿಂದ ಅನುಮತಿ

ಅಂತರ ರಾಜ್ಯ ಮತ್ತು ಜಿಲ್ಲಾ ಸಂಚಾರ ನಿರ್ಬಂಧ ಮುಂದುವರಿಕೆ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 14:33 IST
Last Updated 18 ಏಪ್ರಿಲ್ 2020, 14:33 IST
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.   

ಚಿತ್ರದುರ್ಗ: ‘ಸರ್ಕಾರದ ಸೂಚನೆ ಅನ್ವಯ ಏ. 20ರಿಂದ ಗ್ರಾಮೀಣ ಉದ್ಯೋಗ, ಸಣ್ಣ ಕೈಗಾರಿಕೆ ಸೇರಿ ವಿವಿಧ ಉದ್ಯಮಗಳ ಆರಂಭಕ್ಕೆ ಅನುಮತಿ ನೀಡಲಾಗುವುದು. ಆದರೆ, ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಮೇ. 3ರ ವರೆಗೆ ಜಾರಿಯಲ್ಲಿದ್ದರೂ ಕೆಲವು ಸೇವೆಗಳಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆ, ಅಂತರ ರಾಜ್ಯ ಮತ್ತು ಜಿಲ್ಲಾ ಸಂಚಾರದ ನಿರ್ಬಂಧ ಮುಂದುವರೆಯಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮುಂದಿನ 15 ದಿನಗಳೂ ಜಿಲ್ಲೆಗೆ ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ವೇಳೆ ಸಾರ್ವಜನಿಕರು ಲಾಕ್‌ಡೌನ್ ನಿಯಮ ತಪ್ಪದೇ ಪಾಲಿಸಬೇಕು. ಅನಗತ್ಯವಾಗಿ ಸಂಚರಿಸಬಾರದು. ಮನೆಯಲ್ಲೇ ಇದ್ದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಹೋಟೆಲ್, ಡಾಬಾಗಳು ಕನಿಷ್ಟ ಸಂಖ್ಯೆಯ ನೌಕರರೊಂದಿಗೆ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಿ ಅಗತ್ಯ ಇರುವವರಿಗೆ ಮಾತ್ರ ಪಾರ್ಸಲ್ ನೀಡಬಹುದು. ಇ-ಕಾಮರ್ಸ್ ಕಂಪನಿಗಳಿಂದ ಆನ್‌ಲೈನ್ ಮೂಲಕ ವಸ್ತುಗಳ ಡೆಲಿವರಿ, ಕಿರಾಣಿ ಅಂಗಡಿಗಳು, ಹಣ್ಣು, ತರಕಾರಿ, ಹಾಲಿನ ಕೇಂದ್ರಗಳಲ್ಲಿ ಅಂತರ ಕಡ್ಡಾಯ. ಕೊರಿಯರ್ ಸರ್ವೀಸ್, ಕೋಲ್ಡ್ ಸ್ಟೋರೇಜ್, ವೇರ್‌ಹೌಸ್ ಸೇವೆ, ಖಾಸಗಿ ಭದ್ರತಾ ಸೇವೆ ಒದಗಿಸಬಹುದು’ ಎಂದು ಮಾಹಿತಿ ನೀಡಿದರು.

‘ಎಲ್ಲ ಸರಕು ಸಾಗಾಣೆ ವಾಹನಗಳು ಸಂಚರಿಸಲು ಅವಕಾಶವಿದೆ. ಆದರೆ, ವಾಹನದಲ್ಲಿ ಚಾಲಕ ಮತ್ತು ಕ್ಲೀನರ್‌ಗೆ ಮಾತ್ರ ಅವಕಾಶ. ಅಗತ್ಯ ಸೇವೆ ಒದಗಿಸುವವರಿಗೆ ಜಿಲ್ಲೆಯ ಒಳಗೆ ಸಂಚರಿಸಲು ದ್ವಿಚಕ್ರ ವಾಹನಕ್ಕೆ ಅವಕಾಶವಿದ್ದು, ಒಬ್ಬ ಸವಾರ ಮಾತ್ರ ಸಂಚರಿಸಬಹುದು. ಇದಕ್ಕೆ ಪಾಸ್ ಅಗತ್ಯವಿಲ್ಲ. ಅನಾವಶ್ಯಕವಾಗಿ ಈ ಅವಕಾಶ ದುರುಪಯೋಗ ಪಡಿಸಿಕೊಳ್ಳಬಾರದು’ ಎಂದು ಎಚ್ಚರಿಕೆ ನೀಡಿದರು.

‘15 ದಿನಗಳಿಗೊಮ್ಮೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಕ್ಕಳು ಮತ್ತು ಗರ್ಭಿಣಿಯರಿಗೆ ಅವರ ಮನೆ ಬಾಗಿಲಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುವುದು’ ಎಂದ ಅವರು, ‘ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ 379 ಎಫ್‌ಐಆರ್ ದಾಖಲಾಗಿದೆ. 1016 ಜನರನ್ನು ಬಂಧಿಸಲಾಗಿದೆ. ಅಲ್ಲದೆ, 672 ವಾಹನ ಜಪ್ತಿ ಮಾಡಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಕೋವಿಡ್-19 ಆಸ್ಪತ್ರೆ ಸಂಪೂರ್ಣ ಸಿದ್ಧವಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಹಾಗಂತ ಮನಸೋ ಇಚ್ಛೆ ಸಂಚಾರ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಆಂಧ್ರಪ್ರದೇಶದ ಗಡಿ ಬಫರ್ ಜೋನ್:‘ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಾಜೂರು ಸೇರಿ ಎಲ್ಲವನ್ನು ಬಫರ್ ಜೋನ್ ಎಂದು ಪರಿಗಣಿಸಿ, ತೀವ್ರ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ವಿನೋತ್‌ ಪ್ರಿಯಾ ತಿಳಿಸಿದರು.

‘ಜಿಲ್ಲೆಯಲ್ಲಿ ಒಂದು ಪ್ರಕರಣ ಈ ಹಿಂದೆ ದೃಢಪಟ್ಟಿತ್ತು. ದಾವಣಗೆರೆಗೆ ಸ್ಥಳಾಂತರಗೊಂಡಿದ್ದ ರೋಗಿಯೂ ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದ ಅವರು, ‘ಜ್ವರ, ಕೆಮ್ಮು, ಶೀತ ರೋಗ ಲಕ್ಷಣಗಳುಳ್ಳ ಶಂಕಿತರ ಗಂಟಲು ದ್ರವ, ರಕ್ತದ ಮಾದರಿಯನ್ನು ಮಾತ್ರ ತಪಾಸಣೆ ಮಾಡಲಾಗುವುದು. ಆದ್ದರಿಂದ ರೋಗ ಲಕ್ಷಣ ಇದ್ದರೆ, ತಡ ಮಾಡದೇ ಸ್ವಯಂಪ್ರೇರಿತರಾಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಇದ್ದರು.

ಅಂತರದೊಂದಿಗೆ ನೂತನ ಮಾರ್ಗಸೂಚಿ

ಅನುಮತಿ

ಗ್ರಾಮೀಣ ಭಾಗದ ಕೈಗಾರಿಕೆಗಳು,ಕಟ್ಟಡ ನಿರ್ಮಾಣ ಕಾರ್ಯ,ಮರಳು, ಕಲ್ಲು, ಇಟ್ಟಿಗೆ ಸಾಗಾಟ,ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಲ್ಯಾಬ್,ಪಶು ಆಸ್ಪತ್ರೆ,ಕೃಷಿ, ತೋಟಗಾರಿಕೆ ಸಂಬಂಧಿಸಿದ ಎಲ್ಲಾ ಮಳಿಗೆಗಳು,ಎಪಿಎಂಸಿ,ಮೀನುಗಾರಿಕೆ,ಉದ್ಯೋಗ ಖಾತ್ರಿ ಯೋಜನೆ,ಎಲೆಕ್ಟ್ರೀಷಿಯನ್,ಐಟಿ ರಿಪೇರಿ,ಪ್ಲಂಬರ್ಸ್‌,ಮೋಟಾರ್ ಮೆಕ್ಯಾನಿಕ್ಸ್,ಕಾರ್ಪೆಂಟರ್ಸ್‌,ಟ್ರಕ್ ರಿಪೇರಿ ಶಾಪ್‌ಗಳು,ಅಗತ್ಯ ವಸ್ತುಗಳ ಸಾಗಾಣಿಕೆ

ಅನುಮತಿ ಇಲ್ಲ

ಸಿನಿಮಾ ಮಂದಿರ,ಶಾಪಿಂಗ್ ಕಾಂಪ್ಲೆಕ್ಸ್,ಜಿಮ್,ಕ್ರೀಡಾ ಚಟುವಟಿಕೆ,ಈಜುಕೊಳ,ಮದ್ಯ ಮಾರಾಟ,ಸಾರ್ವಜನಿಕ ಸಮಾರಂಭ,ದೇಗುಲಗಳು ತೆರೆಯುವಂತಿಲ್ಲ,ಅನಗತ್ಯ ವಾಹನ ಸಂಚಾರ ನಿರ್ಬಂಧ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.