ADVERTISEMENT

ಚಳ್ಳಕೆರೆ ಮಹಿಳೆಗೆ ರಾಷ್ಟ್ರೀಯ ಪುರಸ್ಕಾರ

ವಸತಿ ಯೋಜನೆಯಡಿ ನಿರ್ಮಾಣವಾದ ಮನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 14:27 IST
Last Updated 1 ಜನವರಿ 2021, 14:27 IST
ಆನ್‌ಲೈನ್‌ ಮೂಲಕ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರದುರ್ಗದಿಂದ ಭಾಗವಹಿಸಿದ್ದ  ಪಂಕಜಾ ಅವರೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇದ್ದರು.
ಆನ್‌ಲೈನ್‌ ಮೂಲಕ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರದುರ್ಗದಿಂದ ಭಾಗವಹಿಸಿದ್ದ  ಪಂಕಜಾ ಅವರೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇದ್ದರು.   

ಚಿತ್ರದುರ್ಗ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಅತ್ಯುತ್ತಮವಾಗಿ ಮನೆ ಕಟ್ಟಿಕೊಂಡ ಚಳ್ಳಕೆರೆಯ ಪಂಕಜಾ ಅವರಿಗೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು.

ಚಳ್ಳಕರೆಯ ವೆಂಕಟೇಶ್ವರ ಬಡಾವಣೆಯಲ್ಲಿ ಪಂಕಜಾ ಹಾಗೂ ಕರಿಬಸಪ್ಪ ದಂಪತಿ ಸಣ್ಣದೊಂದು ಮನೆ ನಿರ್ಮಿಸಿಕೊಂಡಿದ್ದಾರೆ. 2015–16ನೇ ಆರ್ಥಿಕ ವರ್ಷದಲ್ಲಿ ಇವರಿಗೆ ₹ 2.75 ಲಕ್ಷ ಧನಸಹಾಯ ದೊರಕಿತ್ತು. ಅಗತ್ಯವಿರುವ ಹಣ ಒಗ್ಗೂಡಿಸಿ ಆಕರ್ಷಕವಾಗಿ ಮನೆ ನಿರ್ಮಿಸಿಕೊಂಡಿದ್ದರು.

ಸಣ್ಣದೊಂದು ಕಿರಾಣಿ ಅಂಗಡಿ ನಡೆಸುವ ದಂಪತಿಗೆ ಮನೆ ನಿರ್ಮಿಸಿಕೊಳ್ಳುವ ಕನಸು ಬಹುದಿನಗಳಿಂದ ಇತ್ತು. ಒಂದು ದಶಕದಿಂದ ಚಳ್ಳಕೆರೆ ನಗರದಲ್ಲಿ ಶ್ರಮಿಸುತ್ತಿದ್ದರು. ನಗರಸಭೆಯ ಅಧಿಕಾರಿಗಳ ಮಾರ್ಗದರ್ಶನದಿಂದ ಪ್ರಧಾನಮಂತ್ರಿ ಆವಾಸ್‌ ನಗರ ವಸತಿ ಯೋಜನೆಯಡಿ ಧನಸಹಾಯ ಪಡೆದಿದ್ದರು.

ADVERTISEMENT

ಈ ಯೋಜನೆಯಡಿ ರಾಜ್ಯದ ಮೂರು ಮನೆಗಳಿಗೆ ಪುರಸ್ಕಾರ ಸಿಕ್ಕಿದೆ. ಚಾಮರಾಜನಗರ ಹಾಗೂ ಕೊಪ್ಪಳದ ಮತ್ತಿಬ್ಬರು ಪುರಸ್ಕಾರಕ್ಕೆ ಭಾಜನಾರಾಗಿದ್ದಾರೆ. ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುರಸ್ಕೃತರನ್ನು ಅಭಿನಂದಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇದ್ದರು.

***

ಮನೆ ಕಟ್ಟಿಕೊಳ್ಳಬೇಕು ಎಂಬ ಚಿಕ್ಕ ಆಸೆ ಇತ್ತು. ಪ್ರಧಾನಮಂತ್ರಿ ನೆರವಿನಿಂದ ಕನಸಿನ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಯಿತು. ರಾಷ್ಟ್ರೀಯ ಪುರಸ್ಕಾರ ಸಿಕ್ಕಿದ್ದು ಸಂತಸ ಮೂಡಿಸಿದೆ.

–ಪಂಕಜಾ,ಪ್ರಶಸ್ತಿ ಪುರಸ್ಕೃತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.