
ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಸೂಕ್ತವಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ ಕೇಂದ್ರ ನೋಡಲ್ ಅಧಿಕಾರಿ ಎಂ.ಎನ್.ಅಜಯ್ ನಾಗಭೂಷಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆ (ಪಿಎಂಡಿಡಿಕೆವೈ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮ ವಹಿಸಬೇಕು’ ಎಂದರು.
‘ಶೇಂಗಾ, ರಾಗಿ, ತೊಗರಿ, ಸಿರಿಧಾನ್ಯಗಳ ಉತ್ಪಾದಕತೆ ಹಾಗೂ ಇಳುವರಿ ಪ್ರಮಾಣ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಗೊಬ್ಬರಗಳ ಬಳಕೆ, ಮಣ್ಣಿನ ಫಲವತ್ತತೆ ನಿರ್ವಹಣೆ, ಉತ್ತಮ ತಳಿಗಳ ಅಳವಡಿಕೆ, ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಸ್ಪಿಂಕ್ಲರ್, ಡ್ರಿಪ್ ಅಳವಡಿಕೆ ಮಾಡುವ ಮೂಲಕ ಕೃಷಿ ಉತ್ಪಾದಕತೆ ಹೆಚ್ಚಳ ಮಾಡಬೇಕು’ ಎಂದು ತಿಳಿಸಿದರು.
‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಸಿರಿಧಾನ್ಯಗಳಿಗೂ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಕುರಿತು ರೈತರಿಗೆ ಜಾಗೃತಿ ಮೂಡಿಸಿದರೆ ಬೆಳೆಗಳ ಇಳುವರಿ ಹಾಗೂ ಆದಾಯವೂ ಹೆಚ್ಚಳವಾಗಲಿದೆ. ಉತ್ತಮ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು’ ಎಂದು ಸೂಚಿಸಿದರು.
‘ಕೃಷಿ ಕೂಲಿಕಾರ್ಮಿಕರ ಸಮಸ್ಯೆ ನೀಗಿಸುವುದಕ್ಕಾಗಿ ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ 20 ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರಾರಂಭ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.