ಚಿತ್ರದುರ್ಗ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು, ನಗರದ ವೈದ್ಯರೊಬ್ಬರಿಗೆ ₹ 1.27 ಕೋಟಿ ವಂಚಿಸಿದ್ದಾರೆ.
ಹಣ ಕಳೆದುಕೊಂಡ ಬಗ್ಗೆ ವೈದ್ಯರೊಬ್ಬರು ಇಲ್ಲಿನ ಸಿಇಎನ್ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
ಆಗಸ್ಟ್ 21ರಂದು ವೈದ್ಯರಿಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ್ದ ವಂಚಕರು, ‘ನಿಮ್ಮ ಖಾತೆಯಲ್ಲಿರುವ ಹಣ ಅಕ್ರಮವಾಗಿ (ಮನಿ ಲಾಂಡ್ರಿಂಗ್) ವರ್ಗಾವಣೆಯಾಗಿದೆ. ಅದಕ್ಕೆ ಲೆಕ್ಕಪರಿಶೋಧನೆಯ ಅಗತ್ಯವಿದೆ. ತಕ್ಷಣವೇ ಪ್ರತ್ಯೇಕ ಖಾತೆಯೊಂದಕ್ಕೆ ನೀವು ಹಣ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ಇದೆ’ ಎಂದು ಬೆದರಿಸಿದ್ದಾರೆ.
ಇದನ್ನು ನಂಬಿದ ವೈದ್ಯರು ಆಗಸ್ಟ್ 22ರಂದು ವಂಚಕರು ಹೇಳಿದ ಪ್ರತ್ಯೇಕ ಖಾತೆಗೆ ₹ 1.27 ಕೋಟಿ ಹಣ ವರ್ಗಾಯಿಸಿದ್ದಾರೆ. ನಂತರ ತಮ್ಮ ಹಣದ ಬಗ್ಗೆ ಯಾವುದೇ ಮಾಹಿತಿ ಬಾರದಿದ್ದಾಗ ವಂಚನೆಗೆ ಒಳಗಾಗಿರುವ ವಿಷಯ ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಅಪರಾಧ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.