ಚಿಕ್ಕಜಾಜೂರು: ಇಲ್ಲಿನ ರೈಲ್ವೆ ಮೇಲ್ಸೇತುವೆಯ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಓಡಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ವಾಹನ ಸವಾರರು ಹಾಗೂ ವಾಯುವಿಹಾರಿಗಳು ಆರೋಪಿಸಿದ್ದಾರೆ.
ಚಿಕ್ಕಜಾಜೂರಿನಿಂದ ಹೊಸನಗರ ಬಡಾವಣೆ ಹಾಗೂ ಇತರೆ ಕಡೆಗಳಿಗೆ ಸಂಚರಿಸಲು ಮೇಲ್ಸೇತುವೆ ಮೇಲೆ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ರಸ್ತೆ ಅಲ್ಲಲ್ಲಿ ಹಾಳಾಗಿದೆ. ರಸ್ತೆಗೆ ಹಾಕಲಾಗಿರುವ ಮಣ್ಣು ಒಂದು ಕಡೆ ಕುಸಿಯುತ್ತಿದ್ದು, ಸವಾರರು ಜೀವ ಭಯದಲ್ಲಿ ವಾಹನಗಳನ್ನು ಓಡಿಸುವಂತಾಗಿದೆ. ವೇಗವಾಗಿ ವಾಹನ ಚಾಲನೆ ಮಾಡಿದರೆ ಅವಘಡ ಸಂಭವಿಸುವುದು ಖಚಿತ ಎಂದು ವಾಹನ ಚಾಲಕರಾದ ಬಸವರಾಜ್, ರಾಜಣ್ಣ, ಚಂದ್ರಪ್ಪ ಹೇಳಿದ್ದಾರೆ.
‘ಗ್ರಾಮಸ್ಥರು ಈ ವಿಚಾರವನ್ನು ಲೋಕೋಪಯೋಗಿ ಇಲಾಖೆ ಎಎಇಗೆ ತಿಳಿಸಿದ್ದರೂ, ಅವರು ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ತಕ್ಷಣವೇ ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರ ಆತಂಕವನ್ನು ನಿವಾರಿಸಬೇಕು’ ಎಂದು ವಾಯು ವಿಹಾರಿ ಸಂಘದ ಜಿ. ನಟರಾಜ್, ಮಾರುತಿ, ಸತೀಶ್, ಸೀನಪ್ಪ, ಅರವ ಮಂಜು, ದೇವರಾಜ್, ನಿಜಗುಣ, ನಾಗರಾಜ್ ಮೊದಲಾದವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.