ADVERTISEMENT

ಆಶಾ ಕಾರ್ಯಕರ್ತೆಯರ ಹೋರಾಟ ಮೇ 17ಕ್ಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 12:33 IST
Last Updated 9 ಮೇ 2022, 12:33 IST

ಚಿತ್ರದುರ್ಗ: ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೇ 17ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಶಾ ಕಾರ್ಯಕರ್ತೆಯರು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಕೋವಿಡ್ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಹಗಲಿರುಳು ದುಡಿದರೂ ಅವರಿಗೆ ನೀಡುವ ಗೌರವಧ ಅತ್ಯಲ್ಪ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಿತ್ಯ ಎರಡು ಗಂಟೆ ಮಾತ್ರ ಸೇವೆ ಸಲ್ಲಿಸುವಂತೆ ಆದೇಶದಲ್ಲಿದೆ. ಕೆಲಸದ ಹೊರೆ ಹೆಚ್ಚಾಗಿದ್ದು, ನಿತ್ಯ ಎಂಟು ಗಂಟೆ ದುಡಿಯುವುದು ಅನಿವಾರ್ಯವಾಗಿದೆ. ಇತ್ತೀಚಿನ ಬಜೆಟ್‌ನಲ್ಲಿ ಒಂದು ಸಾವಿರ ಗೌರವಧನ ಹೆಚ್ಚಿಸಲಾಗಿದೆ. ಇಂದಿನ ಬೆಲೆ ಏರಿಕೆ, ಆಶಾ ಕಾರ್ಯಕರ್ತೆಯರಿಗೆ ನೀಡಿದ ಜವಾಬ್ದಾರಿಗೆ ಹೋಲಿಸಿದರೆ ಗೌರವಧನ ಹೆಚ್ಚಳ ಕೇವಲ ತೋರಿಕೆ ಎಂಬಂತಾಗಿದೆ’ ಎಂದರು.

ADVERTISEMENT

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ‘ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಡಾಟಾ ಎಂಟ್ರಿ ಮಾಡಿದರೆ ಮಾತ್ರ ಗೌರವಧನ ಸಿಗುತ್ತದೆ. ಇದರಲ್ಲಿ ಆಗುವ ತಾಂತ್ರಿಕ ಸಮಸ್ಯೆಯಿಂದ ಅನೇಕರು ಗೌರವ ಧನ ಕಳೆದುಕೊಂಡಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಸೇವೆಯನ್ನು ಕಾಯಂಗೊಳಿಸಿ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷೆ ಲಕ್ಷ್ಮಿಬಾಯಿ, ಪ್ರಧಾನ ಕಾರ್ಯದರ್ಶಿ ಗುರುಶಾಂತಾ, ಮುಖಂಡರಾದ ಡಿ.ಎಸ್‌.ಹಳ್ಳಿ ಸುಮಾ, ನಾಗಮ್ಮ, ಪ್ರೇಮಾ, ಪುಷ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.