ADVERTISEMENT

ಚಿತ್ರದುರ್ಗ: ಬಂದ್‌ಗೆ ಕಾರ್ಮಿಕ, ರೈತ ಸಂಘ ಕರೆ

ಸಾರ್ವಜನಿಕರ ಸಹಕಾರ ಯಾಚಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 11:25 IST
Last Updated 6 ಜನವರಿ 2020, 11:25 IST

ಚಿತ್ರದುರ್ಗ: ಕೇಂದ್ರ ಸರ್ಕಾರದ ಕಾರ್ಮಿಕರ ಹಾಗೂ ರೈತ ನೀತಿಯನ್ನು ವಿರೋಧಿಸಿ ಜ.8ರಂದು ಕರೆ ನೀಡಿದ ‘ಭಾರತ ಬಂದ್‌’ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದ ಸಾರ್ವಜನಿಕರು ಬಂದ್‌ಗೆ ಸಹಕರಿಸುವಂತೆ ಕಾರ್ಮಿಕರ ಹಾಗೂ ರೈತ ಸಂಘಟನೆಗಳು ಸೋಮವಾರ ಮನವಿ ಮಾಡಿವೆ.

‘ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ನೀಡಿದ ಭರವಸೆಯ ಮೇಲೆ ನಂಬಿಕೆ ಇಟ್ಟು ಜನರು ಮತ ಹಾಕಿದರು. ಆದರೆ, ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶವನ್ನು ರಕ್ಷಿಸಲು ಬಂದ್‌ಗೆ ಕರೆ ನೀಡಲಾಗಿದೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೈಗಾರಿಕೆಗಳು, ಉದ್ದಿಮೆಗಳು ಬಾಗಿಲು ಮುಚ್ಚುತ್ತಿವೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ ಕೇಂದ್ರ ಸರ್ಕಾರ ಕೆಟ್ಟ ನೀತಿಗಳನ್ನು ಕೈಗೊಳ್ಳುತ್ತಿದೆ. ಡಾ.ಸ್ವಾಮಿನಾಥನ್ ವರದಿ ಜಾರಿಯಾಗಿಲ್ಲ. ಎಲ್ಲ ಸಮುದಾಯದ ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

ADVERTISEMENT

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂಥ್‌ ಆರ್ಗನೈಸೇಷನ್‌ (ಎಐಡಿವೈಒ) ಮುಖಂಡ ರವಿಕುಮಾರ್, ‘ಕೇಂದ್ರ ಸರ್ಕಾರದ ಕೆಟ್ಟ ನೀತಿಯ ಪರಿಣಾಮ ಹಕ್ಕುಗಳು ಸಡಿಲಗೊಳ್ಳುತ್ತಿವೆ. ಆರ್ಥಿಕ ಮುಗ್ಗಟ್ಟು ಎದುರಿಸಲಾಗದೆ ಖಾಸಗಿ ಕಂಪನಿ ಬಾಗಿಲು ಮುಚ್ಚಲು ಹೊರಟಿವೆ. ಆರ್ಥಿಕ ಸ್ಥಿತಿ ಕುಸಿದಿದ್ದು, ದೇಶ ಮುಗ್ಗಟ್ಟಿನಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ‘ಬೆಲೆ ಏರಿಕೆ ನಿಯಂತ್ರಿಸಿ ರೈತರ ಬದುಕು ಸುಧಾರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರಗಳು ಶ್ರೀಮಂತರ ಪರವಾಗಿವೆ. ಪಡಿತರ ವಿತರಣೆ ವ್ಯವಸ್ಥೆಯನ್ನು ರದ್ದುಗೊಳಿಸುವ ಹುನ್ನಾರ ನಡೆಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ದೇಶದ ಶಾಂತಿ ಕದಡುತ್ತಿದೆ’ ಎಂದು ಕಿಡಿಕಾರಿದರು.

ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ‘ಬಂದ್‌ ರಾಷ್ಟ್ರವ್ಯಾಪಿ ನಡೆಯಲಿದೆ. ಎಲ್ಲಾ ತಾಲ್ಲೂಕು ಬಂದ್‍ಗೆ ಕರೆ ನೀಡಲಾಗಿದೆ. ನಿರುದ್ಯೋಗ, ಬೆಲೆ ಏರಿಕೆ ದೇಶವನ್ನು ಕಾಡುತ್ತಿದೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಜೀವನ ಭದ್ರೆಯಿಲ್ಲ. ಹತ್ತಾರು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕಾರ್ಮಿಕರು, ರೈತರು, ವರ್ತಕರು ಸಹಕರಿಸಬೇಕು’ ಎಂದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‍ಬಾಬು, ಟಿ.ಆರ್.ಉಮಾಪತಿ, ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಂಚಾಲಕ ಟಿ.ಶಫಿವುಲ್ಲಾ, ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ ಬಾಬು, ಧನಂಜಯ, ಎಐಡಿವೈಒ ಲಿಂಗರಾಜು, ಸುಜಾತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.