ಚಳ್ಳಕೆರೆ: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿದಿರುವ ಕಾರಣ ಕಂಗಲಾದ ಬೆಳೆಗಾರು ಕಟಾವಿಗೆ ಬಂದ 40ಕ್ಕೂ ಹೆಚ್ಚು ಎಕರೆ ಪ್ರದೇಶದ ಟೊಮೆಟೊ ಬೆಳೆಯನ್ನು ಹೊಲದಲ್ಲಿಯೇ ಬಿಟ್ಟಿದ್ದಾರೆ.
ಬೆಳೆಗೆ ಬೆಲೆ ಇಲ್ಲದಿರುವುದರಿಂದ ರಾಮಜೋಗಿಹಳ್ಳಿ, ದುರ್ಗಾವರ, ಗೋಪನಹಳ್ಳಿ, ರೆಡ್ಡಿಹಳ್ಳಿ, ದೇವರಮರಿಕುಂಟೆ, ನನ್ನಿವಾಳ, ಕುರುಡಿಹಳ್ಳಿ, ಕ್ಯಾದಿಗುಂಟೆ, ಮಹದೇವಪುರ, ನಾರಾಯಣಪುರ, ನೇರಲಗುಂಟೆ, ಬೆಳೆಗೆರೆ, ಹುಲಿಕುಂಟೆ ಗ್ರಾಮಗಳಲ್ಲಿ ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಲ್ಲಂಗಡಿ ಬೆಳೆಯಿಂದ ನಷ್ಟ ಅನುಭವಿಸಿದ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ನೀಲಕಂಠಪ್ಪ ಈ ಬಾರಿಯಾದರೂ ಉತ್ತಲ ಲಾಭದ ನಿರೀಕ್ಷೆಯಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ₹ 3 ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದರು. ಉತ್ತಮ ಇಳುವರಿ ಬಂದಿತ್ತು. ಆದರೆ ಬೆಲೆ ಇಲ್ಲದ ಕಾರಣ ಹಾಗೆಯೇ ಬಿಟ್ಟಿದ್ದಾರೆ.
‘ಉತ್ತಮ ಇಳುವರಿ ಇದ್ದ ಕಾರಣ ₹ 5-6 ಲಕ್ಷ ಆದಾಯದ ನಿರೀಕ್ಷೆಯೂ ಇತ್ತು. ಆದರೆ ಕಟಾವ್ ಮಾಡಿದ ಮೊದಲ ಬೆಳೆ 500 ಕೆ.ಜಿ. ಟೊಮೆಟೊವನ್ನು ಕೋಲಾರದ ಮಾರುಕಟ್ಟೆಗೆ ಕಳುಹಿಸಿದರೆ ವಾಹನ ಬಾಡಿಗೆ ಮತ್ತು ಕಾರ್ಮಿಕರ ಕೂಲಿ ತೆಗೆದು ಸಿಕ್ಕಿದ್ದು ₹ 4,000 ಮಾತ್ರ. ಮುಂದೆ ಬೆಳೆ ಕಟಾವ್ ಮಾಡುವುದೇ ಬೇಡ ಎಂದು ಹೊಲದಲ್ಲಿಯೇ ಬಿಟ್ಟಿದ್ದೇನೆ’ ಎಂದು ನೀಲಕಂಠಪ್ಪ ನೊಂದು ನುಡಿದರು.
‘10 ಕೆ.ಜಿ. ಟೊಮೆಟೊ ಒಂದು ಬಾಕ್ಸ್‌ಗೆ ₹ 60 ಕ್ಕೆ ಖರೀದಿ ಮಾಡುವ ವರ್ತಕರು, ಪ್ರತಿದಿನ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 30-40ಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ’ ಎಂದು ಬೆಳೆಗಾರ ತಿಪ್ಪೇಸ್ವಾಮಿ ಬೇಸರಿಸಿದರು.
ತಾಲ್ಲೂಕಿನಲ್ಲಿ ಒಟ್ಟು 60 ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆಯಲಾಗಿದೆ. ಟೊಮೆಟೊಗೆ ಎಂದಿನಂತೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವ ಕಾರಣ ಬೆಳೆಗಾರರು ಕಂಗಲಾಗಿದ್ದಾರೆ. ಈಗಾಗಲೆ ನಾಟಿ ಮಾಡಿರುವ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.