ADVERTISEMENT

ಸ್ಮಶಾನ ನಿರ್ಮಾಣಕ್ಕೆ ಆದ್ಯತೆ ನೀಡಿ

ಸರ್ಕಾರಿ ಜಾಗ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಿ; ಶಾಸಕ ರಘುಮೂರ್ತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST
ಚಿತ್ರದುರ್ಗದಲ್ಲಿ ಗುರುವಾರ ಚಳ್ಳಕೆರೆ ಶಾಸಕ ರಘುಮೂರ್ತಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಶೀಲ್ದಾರ್ ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಇಒ ಕೃಷ್ಣಾನಾಯ್ಕ ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಚಳ್ಳಕೆರೆ ಶಾಸಕ ರಘುಮೂರ್ತಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಶೀಲ್ದಾರ್ ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಇಒ ಕೃಷ್ಣಾನಾಯ್ಕ ಇದ್ದರು.   

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ ತಾಲ್ಲೂಕಿನ ಗ್ರಾಮಗಳಲ್ಲಿ ಸ್ಮಶಾನಕ್ಕೆ ಸೂಕ್ತ ಸ್ಥಳವಕಾಶ ಕಲ್ಪಿಸುವಂತೆ ತಾಲ್ಲೂಕು ಪಂಚಾಯಿತಿ ಗುರುವಾರ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಮಶಾನಗಳ ವಿಚಾರ ಚರ್ಚೆಗೆ ಬಂದಿತು. ಸರ್ಕಾರಿ ಜಾಗ ಇಲ್ಲದಿದ್ದರೆ, ಖಾಸಗಿ ಜಮೀನು ಖರೀದಿಸುವ ಕುರಿತು ಗಮನ ಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

‘ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬರು ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ತೋಟ ನಿರ್ಮಿಸಿಕೊಂಡಿದ್ದಾರೆ. ತೆರವುಗೊಳಿಸಲು ಹೋಗಿದ್ದ ಜೆಸಿಬಿಯನ್ನು ವಾಪಾಸು ಕಳಿಸಿದ್ದಾರೆ. ಅಲ್ಲಿನ ಪಿಡಿಒಗೆ ಸಕಾರಾತ್ಮಕವಾಗಿ ಸ್ಪಂದಿಸದೇ ತೆರವಿಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ದೂರು ಇದೆ. ಈ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಿ’ ಎಂದು ಕಾರ್ಯನಿರ್ವಾಹಕ ಅಧಿಕಾರಿಗೆ ಶಾಸಕ ರಘುಮೂರ್ತಿ ತಾಕೀತು ಮಾಡಿದರು.

ADVERTISEMENT

‘ಜಾಗದ ಸುತ್ತಳತೆಯನ್ನು ಒಂದು ವಾರದೊಳಗೆ ಮಾಡಿಸಲಾಗುವುದು. ಒತ್ತುವರಿ ಮಾಡಿಕೊಂಡಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಲಾಗುವುದು. ಸ್ಮಶಾನ ನಿರ್ಮಾಣಕ್ಕೆ ಯಾವುದಾದರೂ ಗ್ರಾಮದಲ್ಲಿ ಸರ್ಕಾರಿ ಜಾಗ ಸಿಗದಿದ್ದರೆ, ಪ್ರಸ್ತುತ ಈಗಿನ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಹಣ ನೀಡುವ ಮೂಲಕ ಖಾಸಗಿ ಭೂಮಿ ಖರೀದಿಸಲು ಅವಕಾಶ ಇದೆ. ಮೊದಲು ಸ್ಥಳ ಗುರುತಿಸುವ ಕೆಲಸ ಮಾಡಿ’ ಎಂದು ತಹಶೀಲ್ದಾರ್ ವೆಂಕಟೇಶಯ್ಯ ಪಿಡಿಒಗಳಿಗೆ ಸೂಚನೆ ನೀಡಿದರು.

‘ಸ್ವಂತ ಜಮೀನು ಇಲ್ಲದವರು ಗ್ರಾಮದ ಕೆರೆಗಳಲ್ಲೇ ಅಥವಾ ಸಮೀಪದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸುವ ಪರಿಪಾಠ ಕೆಲವೆಡೆಗಳಲ್ಲಿ ಮುಂದುವರೆದಿದೆ. ಹೂಳೆತ್ತುವ ಸಂದರ್ಭದಲ್ಲಿ ಮಾನವನ ಮೂಳೆಗಳು ಸಿಕ್ಕಿರುವ ಉದಾಹರಣೆ ಇದೆ. ಆದ್ದರಿಂದ ಯಾರೇ ಒತ್ತುವರಿ ಮಾಡಿಕೊಂಡಿದ್ದರು ಮುಲಾಜು ನೋಡದೆ, ತೆರವುಗೊಳಿಸಿ’ ಎಂದು ಶಾಸಕರು ತಿಳಿಸಿದರು.

‘ಚಿತ್ರದುರ್ಗ ತಾಲ್ಲೂಕಿನಲ್ಲಿ 651 ಮಿ.ಮೀ ವಾಡಿಕೆ ಮಳೆಗೆ ಈ ಬಾರಿ 795 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಹಿಂಗಾರು ಅವಧಿಯಲ್ಲಿ 65,138 ಹೆಕ್ಟೇರ್ ಪೈಕಿ 45ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಿತ್ತನೆ ಕೈಗೊಂಡಿದ್ದಾರೆ. ತುರುವನೂರು ಹೋಬಳಿಯಲ್ಲಿ 515 ಮಿ.ಮೀ ವಾಡಿಕೆ ಮಳೆಗೆ 807 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಶೇ 107 ರಷ್ಟು ಬಿತ್ತನೆ ಆಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಭಾರತಮ್ಮ ಮಾಹಿತಿ ನೀಡಿದರು.

‘ಮುಂಗಾರು ಅವಧಿಯಲ್ಲಿ ಮಳೆಯಾಗದ ಕಾರಣ 43,138 ಹೆಕ್ಟೇರ್ ಪ್ರದೇಶದ ಬಿತ್ತನೆ ಪ್ರಮಾಣದಲ್ಲಿ ಶೇ 50ಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿದ್ದು, ಚಿತ್ರದುರ್ಗ ತಾಲ್ಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವಾಗಿ ಘೋಷಿಸಿತು. ತಾಲ್ಲೂಕಿನ 28 ಸಾವಿರ ರೈತರು, ಅದರಲ್ಲಿ ತುರುವನೂರು ಹೋಬಳಿಯ 7 ಸಾವಿರ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಅವರಿಗೆ 2019-20ನೇ ಸಾಲಿನ ಬೆಳೆ ಪರಿಹಾರ ಬಂದಿಲ್ಲ. 2018-19ನೇ ಸಾಲಿನಲ್ಲಿ ₹ 13.59 ಕೋಟಿ ಪೈಕಿ ₹ 10 ಕೋಟಿ ಬಿಡುಗಡೆಯಾಗಿದ್ದು, ₹ 3.5 ಕೋಟಿ ಬಾಕಿ ಹಣ ಬರಬೇಕಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ತಾಡಪಾಲು ವಿತರಿಸುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ನಾವು ಹೇಳುವವರಿಗೆ ಕೊಡಿ ಎಂಬುದಾಗಿ ಕೇಳುವುದು ಸಾಮಾನ್ಯ. ಅದಕ್ಕಾಗಿ ಆದ್ಯತೆ ಅನುಸಾರ ಮೀಸಲಿಡಲು ಮುಂದಾಗಿ. ಪ್ರತಿ ಬಾರಿ ಸರ್ಕಾರಿ ಸೌಲಭ್ಯ ಈಗಾಗಲೇ ಪಡೆದವರ ಪಾಲಾಗದೇ ಬೇರೆಯವರಿಗೂ ಸಿಗುವಂತಾಗಬೇಕು. ಈ ಕುರಿತು ನಿಗಾವಹಿಸಿ’ ಎಂದು ರಘುಮೂರ್ತಿ ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಲಿಂಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.