ಹಿರಿಯೂರು: ತಾಲ್ಲೂಕಿನ ದಿಂಡಾವರ ಭಾಗಕ್ಕೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೀಡಿದರು.
ಗ್ರಾಮದಲ್ಲಿ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.
ಕಲ್ಲುವಳ್ಳಿ ಭಾಗದ ಜನರು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ದಿಂಡಾವರದಲ್ಲಿ ಪ್ರೌಢಶಾಲೆಯವರೆಗೆ ಮಾತ್ರ ಓದಲು ಅವಕಾಶವಿದೆ. ನಂತರದ ಓದಿಗೆ ಯಲ್ಲದಕೆರೆ, ಜವನಗೊಂಡನಹಳ್ಳಿ ಅಥವಾ ಹಿರಿಯೂರಿಗೆ ಹೋಗಬೇಕಿದೆ. ಸಾರಿಗೆ ವ್ಯವಸ್ಥೆಯ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಭಾಗಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸಿದರೆ 10–12 ಹಳ್ಳಿಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
‘ದಿಂಡಾವರ ಭಾಗದ 25 ಹಳ್ಳಿಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮಲೇರಿಯಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಪ್ರಯುಕ್ತ ದಿಂಡಾವರ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಬೇಕು. ಈ ಭಾಗದಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿರುವ ಕಾರಣ ವಸತಿಯುತ ಕಾಲೇಜು ಮಂಜೂರು ಮಾಡಿದರೆ ಒಳಿತು’ ಎಂದು ಪ್ರಾಂಶುಪಾಲ ಆರ್. ಮಹೇಶ್ ಸಚಿವರಿಗೆ ಮನವಿ ಮಾಡಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಹಾಂತೇಶ್, ಎಸ್.ಎಲ್.ಎನ್. ಮೂರ್ತಿ, ಎನ್. ಮಹೇಶ್, ಈರಲಿಂಗೇಗೌಡ, ಖಾದಿರಮೇಶ್, ಯಲ್ಲಮ್ಮ ಹನುಮಂತಪ್ಪ, ಅಶೋಕ್, ಪವಿತ್ರಕೃಷ್ಣ, ದೇವರಾಜ್, ಚಂದ್ರಗಿರಿ, ಪೃಥ್ವಿರಾಣಿ, ರಂಗಸ್ವಾಮಿ, ಪ್ರೊ.ಭರತ್, ಪ್ರೊ.ಹೇಮಲತಾ, ಪ್ರೊ.ಜನಾರ್ಧನ್, ಪ್ರೊ. ಜಗನ್ನಾಥ್, ರಾಧಿಕಾ, ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.