ADVERTISEMENT

ಪ್ರಕರಣ ದಾಖಲಿಸಿಕೊಳ್ಳಲು ಆಗ್ರಹ

ಮಹಿಳೆ ಮೇಲೆ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:46 IST
Last Updated 6 ಏಪ್ರಿಲ್ 2021, 15:46 IST
ಚಿತ್ರದುರ್ಗ ತಾಲ್ಲೂಕಿನ ಬೇಡರಶಿವನಕೆರೆ ಗ್ರಾಮದ ಜನರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಜಮಾಯಿಸಿ ದೂರು ದಾಖಲಿಸಿಕೊಳ್ಳುವಂತೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ತಾಲ್ಲೂಕಿನ ಬೇಡರಶಿವನಕೆರೆ ಗ್ರಾಮದ ಜನರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಜಮಾಯಿಸಿ ದೂರು ದಾಖಲಿಸಿಕೊಳ್ಳುವಂತೆ ಮನವಿ ಸಲ್ಲಿಸಿದರು.   

ಚಿತ್ರದುರ್ಗ: ತಾಲ್ಲೂಕಿನ ಬೇಡರಶಿವನಕೆರೆ ಗ್ರಾಮದ ಮಹಿಳೆಯ ಮೇಲೆ ಗುಂಪೊಂದು ನಡೆಸಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಾದಿಗ ಸಮುದಾಯದ ಪ್ರಮುಖರು ಮಂಗಳವಾರ ಪ್ರತಿಭಟನೆ ನಡೆಸಿದರು.

ದೌರ್ಜನ್ಯದಿಂದ ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಆರೋಗ್ಯ ವಿಚಾರಿಸಲು ಬಂದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಧಾವಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಸಲ್ಲಿಸಿದರು.

ಪ್ರೇಮಿಗಳು ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯದ ನಡುವೆ ವೈಮನಸು ಬೆಳೆದಿದೆ. ಏ.3ರಂದು ರಾತ್ರಿ ಮನೆಗೆ ನುಗ್ಗಿದ ಗುಂಪೊಂದು ಹುಡುಗನ ತಾಯಿಯ ಮೇಲೆ ದೌರ್ಜನ್ಯ ಎಸಗಿದೆ ಎನ್ನಲಾಗಿದೆ. ಈ ಸಂಬಂಧ ಮಹಿಳೆಯ ಸಂಬಂಧಿಕರು ನೀಡಿದ ದೂರನ್ನು ಭರಮಸಾಗರ ಠಾಣೆಯ ಪೊಲೀಸರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಮಧ್ಯಪ್ರವೇಶಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಪೊಲೀಸರು ಶಾಸಕರ ಮಾತು ಕೇಳುತ್ತಿದ್ದಾರೆ. ಇದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

***

ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಭರಮಸಾಗರ ಠಾಣೆಗೆ ಮಂಗಳವಾರ ದೂರು ಬಂದಿದೆ. ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು.

–ಜಿ.ರಾಧಿಕಾ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.