ADVERTISEMENT

ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ

ಎಸ್‌ಯುಸಿಐ ಆನ್‌ಲೈನ್‌ ಪ್ರತಿಭಟನೆ, ಸರ್ಕಾರದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಮೇ 2021, 13:13 IST
Last Updated 17 ಮೇ 2021, 13:13 IST
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಎಸ್‌ಯುಸಿಐ ಕಾರ್ಯಕರ್ತರು ಸೋಮವಾರ ಮನೆಗಳಿಂದಲೇ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಎಸ್‌ಯುಸಿಐ ಕಾರ್ಯಕರ್ತರು ಸೋಮವಾರ ಮನೆಗಳಿಂದಲೇ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಾರ್ಯಕರ್ತರು ಸೋಮವಾರ ಆನ್‌ಲೈನ್‌ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲೇ ಉಳಿದಿದ್ದ ಪ್ರತಿಭಟನಾಕಾರರು ಹಕ್ಕೋತ್ತಾಯದ ಭಿತ್ತಿಪತ್ರವನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.

ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಿಪತ್ತನ್ನು ನಿರ್ವಹಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿಲ್ಲ. ಅಗತ್ಯಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡಿಲ್ಲ. ಸೋಂಕಿತರಿಗೆ ಚಿಕಿತ್ಸೆ ವಿಳಂಬವಾಗುತ್ತಿದ್ದು, ಸಾವು–ನೋವು ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೋವಿಡ್‌ ನಿರ್ವಹಣೆಯ ಬಗ್ಗೆ ರೋಗಿಗಳಿಗೆ ತೃಪ್ತಿ ಇಲ್ಲ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ವಕೀಲರೊಬ್ಬರು ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.ಜಿಲ್ಲಾ ಆಸ್ಪತ್ರೆಯಲ್ಲಿ ಜನದಟ್ಟಣೆ ನಿಯಂತ್ರಿಸಿ, ಶುಚಿತ್ವ ಕಾಪಾಡಬೇಕು ಎಂದು ಒತ್ತಾಯಿಸಿದರು.

ಸ್‌ಯುಸಿಐ ಮುಖಂಡ ರವಿಕುಮಾರ್‌ ಮಾತನಾಡಿ, ‘ಕೋವಿಡ್ ಚಿಕಿತ್ಸೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ವಾರ್ಡ್‌ಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು. ಕೋವಿಡ್‌ ಪರೀಕ್ಷೆಯ ಫಲಿತಾಂಶವನ್ನು ತ್ವರಿತಗತಿಯಲ್ಲಿ ನೀಡುವ ವ್ಯವಸ್ಥೆ ರೂಪಿಸಬೇಕು. ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.