ADVERTISEMENT

ಭದ್ರಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 15:41 IST
Last Updated 3 ಜುಲೈ 2019, 15:41 IST
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ವಕೀಲರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ವಕೀಲರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿ ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಭದ್ರಾ ಮೇಲ್ದಂಡೆ ಕಚೇರಿಗೆ ತೆರಳಿದರು. ಪೊಲೀಸ್‌ ಭದ್ರತೆಯನ್ನು ಭೇದಿಸಿಕೊಂಡು ಒಳನುಗ್ಗಿ ಕಚೇರಿಯ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿದರು.

ಚುನಾಯಿತ ಜನಪ್ರತಿನಿದಿಗಳು ಯೋಜನೆಯನ್ನು ಪೂರ್ಣಗೊಳಿಸದೇ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಭದ್ರಾ ನೀರನ್ನು ಚಿತ್ರದುರ್ಗಕ್ಕೆ ತರುವುದಾಗಿ ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ. ಕುಡಿಯುವ ನೀರು ಇಲ್ಲದೇ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಯಾವ ಸಮಸ್ಯೆಗೂ ಕಿವಿಗೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಕಚೇರಿಯ ಸಿಬ್ಬಂದಿ ಹರಸಾಹಸಪಟ್ಟರು.

ADVERTISEMENT

ವಾಣಿವಿಲಾಸ ಸಾಗರ ಜಲಾಶಯದ ನೀರು ಡೆಡ್‌ಸ್ಟೋರೇಜ್‌ ತಲುಪಿದೆ. ಜಲಾಶಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಶಾಂತಿಸಾಗರದ ನೀರು ಕೂಡ ಸರಿಯಾಗಿ ಸರಬರಾಜು ಆಗುತ್ತಿಲ್ಲ. ನಿರಂತರವಾಗಿ ಬರ ಪರಿಸ್ಥಿತಿ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್‌ಕುಮಾರ್, ಖಜಾಂಚಿ ಪ್ರಸನ್ನಕುಮಾರ್, ವಕೀಲರಾದ ಎನ್.ಜಿ.ಕೃಷ್ಣಮೂರ್ತಿ, ಡಿ.ಚಿದಾನಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.