ADVERTISEMENT

ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ

ಎಐಡಿಎಸ್‌ಒ ಜಿಲ್ಲಾ ಘಟಕ ಆಗ್ರಹ – ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:47 IST
Last Updated 27 ನವೆಂಬರ್ 2025, 4:47 IST
ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಎಐಡಿಎಸ್‌ಒ ಜಿಲ್ಲಾ ಘಟಕ
ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಎಐಡಿಎಸ್‌ಒ ಜಿಲ್ಲಾ ಘಟಕ   

ಚಿತ್ರದುರ್ಗ: ಕೆಪಿಎಸ್‌ – ಮ್ಯಾಗ್ನೇಟ್ ಶಾಲೆಯ ಹೆಸರಿನಲ್ಲಿ ಸರ್ಕಾರ ರಾಜ್ಯದ 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಷನ್‌ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳು ನಮ್ಮ ಹಕ್ಕು, ಸರ್ಕಾರಿ ಶಾಲೆ ಮುಚ್ಚಬೇಡಿ – ಬಡ ಮಕ್ಕಳನ್ನು ಕಾಡಬೇಡಿ, ಸಾರ್ವಜನಿಕ ಶಿಕ್ಷಣ ಉಳಿಯಲಿ. ಎಂಬಿತ್ಯಾದಿ ಸಂದೇಶಗಳ ಫಲಕಗಳನ್ನು ಪ್ರದರ್ಶಿಸಿ ಸರ್ಕಾರಕ್ಕೆ ಸಂದೇಶ ರವಾನಿಸಿದರು.

ಕೆಪಿಎಸ್– ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಟಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್‌) - ಮ್ಯಾಗ್ನೆಟ್ ಶಾಲೆಗಳ ಯೋಜನೆ ಎಂಬ ವಂಚನೆಯ ಮುಖವಾಡದ ಅಡಿಯಲ್ಲಿ, ಸರ್ಕಾರವು ರಾಜ್ಯದಾದ್ಯಂತ 40 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಿದ್ಧತೆ ನಡೆಸುತ್ತಿದೆ ಎಂದು ಆರೋಪಿಸಿದರು.

ADVERTISEMENT

‘ಗುಣಮಟ್ಟ’ ಮತ್ತು ‘ಮಾದರಿ ಶಾಲೆಗಳು’ ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಕಷ್ಟಪಟ್ಟುಗಳಿಸಿದ ವ್ಯವಸ್ಥೆಯನ್ನು ನಾಶಪಡಿಸುವ ಒಂದು ನಿಷ್ಕರುಣ ಪ್ರಯತ್ನ ಅಡಗಿದೆ ಎಂದು ದೂರಿದರು.

ಕೇವಲ ಕೆಪಿಎಸ್ ಶಾಲೆಯಿಂದ ಸಮಸ್ಯೆ ಇಲ್ಲ. ಆದರೆ, ಕೇವಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯುವ ಕೆಪಿಎಸ್– ಮ್ಯಾಗ್ನೆಟ್ ಶಾಲೆ ಅತ್ಯಂತ ಅಪಾಯಕಾರಿಯಾಗಿದೆ. ಏಕೆಂದರೆ, ಕರ್ನಾಟಕದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿವೆ. 30 ಸಾವಿರ ಗ್ರಾಮಗಳಿರುವ ನಮ್ಮ ರಾಜ್ಯದಲ್ಲಿ ಕೇವಲ 5,900 ಗ್ರಾಮ ಪಂಚಾಯಿತಿಗಳಿವೆ. ಸರ್ಕಾರದ ಯೋಜನೆಯ ಪ್ರಕಾರ ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ 5,900 ಶಾಲೆಗಳು ಮಾತ್ರ ಉಳಿಯುತ್ತದೆ. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ, ಕಕ್ಕಬ್ಬೆ, ಬೆಟ್ಟಗೆರೆ, ಮತ್ತು ಭಾಗಮಂಡಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ ಎಂದರು.

ಸರ್ಕಾರ ಕೆಪಿಎಸ್ ಮ್ಯಾಗ್ನೇಟ್ ಶಾಲೆ ಸ್ಥಾಪನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ. ಕಡಿಮೆ ಸಂಖ್ಯೆಯ ಹಾಜರಾತಿ ಇರುವ ಶಾಲೆಗಳನ್ನು ಈ ರೀತಿಯ ಶಾಲೆಗಳಿಗೆ ವಿಲೀನಗೊಳಿಸುವುದರಿಂದ ಅನೇಕ ಶಾಲೆಗಳು ಮುಚ್ಚಿ ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಸಮುದಾಯದ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ 5,900 ಕೆಪಿಎಸ್ – ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವ ಉದ್ದೇಶವನ್ನು ರಾಜ್ಯ ಸರ್ಕಾರವು ಹೊಂದಿದೆ. ಹೀಗಾದಲ್ಲಿ 40,000 ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯಕ್ಕೆ ತುತ್ತಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬಿಳೂರು, ಜಿಲ್ಲಾ ಸಂಚಾಲಕ ಕೆ. ಈರಣ್ಣ, ಸಂಘಟನೆಯ ನಿಖಿಲ್‌, ಭರತ್‌, ಶಂಕರ್‌, ವೀರೇಶ್‌, ಪ್ರದೀಪ್‌, ಮಗದೀರ್‌, ಹೇಮಂತ್‌ ಇದ್ದರು.