ADVERTISEMENT

ಚಿತ್ರದುರ್ಗ: ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 15:29 IST
Last Updated 14 ಅಕ್ಟೋಬರ್ 2020, 15:29 IST
ಉತ್ತರಪ್ರದೇಶದ ಹಾಥರಸ್ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಎಐಎಂಎಸ್‌ಎಸ್‌, ಎಐಡಿವೈಒ ಸಂಘಟನೆಗಳ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಉತ್ತರಪ್ರದೇಶದ ಹಾಥರಸ್ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಎಐಎಂಎಸ್‌ಎಸ್‌, ಎಐಡಿವೈಒ ಸಂಘಟನೆಗಳ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.   

ಚಿತ್ರದುರ್ಗ: ದೇಶದಲ್ಲಿ ಸ್ತ್ರೀಯರ ಮೇಲೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಹಾಗೂ (ಎಐಡಿವೈಒ) ಸಂಘಟನೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ದೌರ್ಜನ್ಯ ತಡೆಗೆ ಒತ್ತಾಯಿಸಿದರು. ಉತ್ತರಪ್ರದೇಶದ ಹಾಥರಸ್ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದುಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಎಐಎಂಎಸ್‌ಎಸ್‌ ಸಂಚಾಲಕಿ ಸುಜಾತಾ, ‘ದೇಶದಲ್ಲಿ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಉತ್ತರಪ್ರದೇಶದಲ್ಲಿ ಸ್ತ್ರೀಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದು ಮಹಿಳೆಯರನ್ನು ಆತಂಕಕ್ಕೆ ನೂಕಿದೆ. ಅತ್ಯಾಚಾರ ಪ್ರಕರಣವನ್ನು ತ್ವರಿತವಾಗಿ ಭೇದಿಸುವ ಮೂಲಕ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಹ ಸಂಚಾಲಕಿ ತ್ರಿವೇಣಿ, ‘ಸ್ತ್ರೀಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಭಾವಿಸಿರುವ ಪುರುಷಪ್ರಧಾನ ಧೋರಣೆ ವ್ಯಾಪಕವಾಗಿದೆ. ಎಲ್ಲಾ ಮಹಿಳೆಯರೂ ಸಂಘಟಿತರಾಗಿ ಹೆಣ್ಣಿನ ಮೇಲಿನ ಎಲ್ಲ ರೀತೀಯ ದೌರ್ಜನ್ಯಗಳ ವಿರುದ್ಧ ಹೋರಾಡಬೇಕು’ ಎಂದು ಕೋರಿದರು.

ಎಐಡಿವೈಒ ಜಿಲ್ಲಾ ಅಧ್ಯಕ್ಷ ರವಿಕುಮಾರ್, ಕಾರ್ಯಕರ್ತರಾದ ಕುಮುದಾ, ನಿಂಗರಾಜು, ಕಾರ್ತಿಕ್, ಸಲ್ಮಾ, ಮಮತಾ, ಸಂಧ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.