ADVERTISEMENT

ಉತ್ತರಪ್ರದೇಶ ಸರ್ಕಾರದ ವಜಾಗೆ ಒತ್ತಾಯ

ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ, ಆರೋಪಿಗಳನ್ನು ನೇಣಿಗೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 9:07 IST
Last Updated 6 ಅಕ್ಟೋಬರ್ 2020, 9:07 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸ್ಲಂ ಜನಾಂದೋಲನ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸ್ಲಂ ಜನಾಂದೋಲನ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ನೇಣಿಗೇರಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಸಂಸ್ಥೆ ಹಾಗೂ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಕಾರ್ಯಕರ್ತರು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಪ್ರತಿಭಟನಾಕಾರರು ಉತ್ತರಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ದೇಶ ತಲೆತಗ್ಗಿಸುವಂತೆ ಮಾಡಿದೆ. ಸಂತ್ರಸ್ತೆಯ ನಾಲಿಗೆ ಕತ್ತರಿಸಿ ಕ್ರೂರವಾಗಿ ಕೊಲೆ ಮಾಡಿರುವುದು ಮಾನವೀಯತೆ ನಾಚಿಸುವಂತಿದೆ. ಅಮಾನವೀಯವಾಗಿ ವರ್ತಿಸಿದ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸ್ಲಂ ಜನಾಂದೋಲನಾ ಸಂಸ್ಥೆ ಒತ್ತಾಯಿಸಿದೆ.

ADVERTISEMENT

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರಿಗೆ ರಕ್ಷಣೆ ಇಲ್ಲದಂತಹ ವ್ಯವಸ್ಥೆ ರೂಪುಗೊಂಡಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಆರೋಪಿಸಿದರು.

ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಮಹೇಶ್‌, ಉಪಾಧ್ಯಕ್ಷೆ ಮಾಲತಿ, ಸಂಚಾಲಕ ಟಿ.ಮಂಜಣ್ಣ, ಕಾರ್ಯದರ್ಶಿಗಳಾದ ಜೆ.ಪ್ರಸನ್ನಕುಮಾರ್, ಭಾಗ್ಯಮ್ಮ, ವಸಂತಮ್ಮ ಇದ್ದರು.

ರಾಷ್ಟ್ರಪತಿಗೆ ಮನವಿ:‘ಅತ್ಯಾಚಾರ ಸಂತ್ರಸ್ತೆ ಸಾವಿಗೂ ಮೊದಲು ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯನ್ನು ಬಹಿರಂಗಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲು ಸರ್ಕಾರ ಕಾಲಾಹರಣ ಮಾಡುತ್ತಿದೆ. ಸಂತ್ರಸ್ತೆಯ ಮೃತದೇಹವನ್ನು ಸುಟ್ಟುಹಾಕಿ ಅಮಾನವೀಯತೆ ಮೆರೆಯಲಾಗಿದೆ. ರಾಷ್ಟ್ರಪತಿ ಕೂಡಲೇ ಮಧ್ಯಪ್ರವೇಶ ಮಾಡಬೇಕು’ ಎಂದು ಸಿಐಟಿಯು ಕಾರ್ಯಕರ್ತರು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಸಹಸಂಚಾಲಕ ಸಿ.ಕೆ.ಗೌಸ್‌ಪೀರ್‌, ಉಪಾಧ್ಯಕ್ಷರಾದ ಎಂ.ಡಿ.ಜಿಕ್ರಿಯಾ ಉಲ್ಲಾ, ಸಂಘಟನಾ ಕಾರ್ಯದರ್ಶಿ ಸಣ್ಣಮ್ಮ, ಮುಖಂಡರಾದ ಮಲ್ಲಿಕಾರ್ಜುನ್‌, ದಾದಾಪೀರ್‌ ಇದ್ದರು.

ಪರಿಹಾರಕ್ಕೆ ಒತ್ತಾಯ:ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆ ಕೋರಿ ಅಂಬೇಡ್ಕರ್‌ ಜನಪರ ವೇದಿಕೆ ಪ್ರಧಾನಿ ಅವರಿಗೆ ಮನವಿ ರವಾನಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಕಾರ್ಯಕರ್ತರು ಘಟನೆಯನ್ನು ಖಂಡಿಸಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.