ADVERTISEMENT

ಸಿರಿಗೆರೆ; ಜನರ ಆರೋಗ್ಯದ ಮೇಲೆ ದುಷ್ಪರಿಣಾಮ: ಅದಿರು ಸಾಗಣೆ ಲಾರಿ ತಡೆದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:31 IST
Last Updated 20 ಜೂನ್ 2025, 13:31 IST
ಭೀಮಸಮುದ್ರದಲ್ಲಿ ಗ್ರಾಮಸ್ಥರು ಅದಿರು ಸಾಗಿಸುವ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು
ಭೀಮಸಮುದ್ರದಲ್ಲಿ ಗ್ರಾಮಸ್ಥರು ಅದಿರು ಸಾಗಿಸುವ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು   

ಸಿರಿಗೆರೆ: ‘ಭೀಮಸಮುದ್ರದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಅದಿರು ಸಾಗಿಸುವ ಲಾರಿಗಳಿಂದ ಗ್ರಾಮದ ಮಕ್ಕಳು, ವಯೋವೃದ್ಧರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ’ ಎಂದು ಆರೋಪಿಸಿದ ಗ್ರಾಮಸ್ಥರು ಅದಿರು ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

‘ಅದಿರು ಸಾಗಿಸುವ ಲಾರಿಗಳು ಒಪ್ಪಂದದಂತೆ ನಿತ್ಯವೂ ರಸ್ತೆಗೆ ನೀರು ಚಿಮುಕಿಸಬೇಕು, ಅದಿರು ಸಾಗಿಸುವ ವೇಳೆ ಟಾರ್ಪಾಲು ಮುಚ್ಚಬೇಕು ಎಂಬ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸಾಗಣೆ ಮಾಡುವ ವೇಳೆ ಹರಡುವ ದೂಳು ಮನೆಗಳನ್ನು ಸೇರುತ್ತಿದೆ. ಊಟದ ವೇಳೆ ಲಾರಿಗಳು ಸಂಚರಿಸಿದರೆ ಅದರ ದೂಳು ತಟ್ಟೆಗೂ ಆವರಿಸುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ದಿನವೂ ಬೆಳಿಗ್ಗೆಯಿಂದ ರಾತ್ರಿಯಿಡೀ ಲಾರಿಗಳು ಗ್ರಾಮದ ರಸ್ತೆಗಳಲ್ಲಿ ಸಂಚರಿಸುವುದರಿಂದ ರಸ್ತೆಗಳೂ ಕೂಡ ಹಾಳಾಗಿ ಹೋಗಿವೆ. ಗಣಿ ಕಂಪನಿಗಳು ತಮ್ಮ ಸಂಪನ್ಮೂಲದಿಂದ ಗ್ರಾಮದ ಹೊರ ವಲಯದಲ್ಲಿ ಪ್ರತ್ಯೇಕ ರಸ್ತೆಗಳನ್ನು ನಿರ್ಮಾಣ ಮಾಡಿಕೊಂಡು ಅದಿರು ಸಾಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆಯ ಪಕ್ಕದಲ್ಲಿಯೇ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಗಣಿ ದೂಳಿಗೆ ಹೈರಾಣಾಗಿದ್ದಾರೆ. ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT
ಅದಿರು ಸಾಗಿಸುವ ಲಾರಿಗಳನ್ನು ತಡೆಹಿಡಿದು ಭೀಮಸಮುದ್ರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.